ಸುಬ್ರಹ್ಮಣ್ಯ, ಡಿ 16 (DaijiworldNews/MR): ಬಳ್ಪ ರಕ್ಷಿತಾರಣ್ಯದ ಮೂಲಕ ಹಾದು ಹೋಗುವ ಗುತ್ತಿಗಾರು-ಬಳ್ಪ ರಸ್ತೆ ನಡುವೆ ರಸ್ತೆ ಬದಿಯಲ್ಲಿ ಮಂಗಗಳ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧ. ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಂಗಗಳಿಗೆ ವಿಷ ನೀಡಿ ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸುಮಾರು 30ಕ್ಕೂ ಅಧಿಕ ಮಂಗಗಳು ಸತ್ತು ಬಿದ್ದಿರುವ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದ್ದವು.
ಗುರುವಾರ ಮಧ್ಯಾಹ್ನದ ವೇಳೆ ಸಾಮಾಜಿಕ ಜಾಲತಾಣದ ಮೂಲಕ ಮಂಗಗಳ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಗಗಳಿಗೆ ವಿಷ ನೀಡಿ ಕೊಂದು ಕಾಡೊಳಗೆ ತಂದು ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸುತ್ತಿದೆ.
ಮಂಗಗಳ ಶವವನ್ನು ಯೇನೆಕಲ್ಲು ನರ್ಸರಿಗೆ ಸಾಗಾಟ ಮಾಡಿ, ಮಂಗಗಳ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ಶುಕ್ರವಾರ ನಡೆಸಿ ದಹನ ಮಾಡಲಾಯಿತು ಎಂದು ಸುಬ್ರಹ್ಮಣ್ಯ ಉಪವಿಭಾಗ ಸುಳ್ಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಮಂಗಗಳ ಸಾವಿಗೆ ಕಾರಣ ಏನು ಎಂದು ತನಿಖೆ ಮೂಲಕ ತಿಳಿದು ಬರಲಿದೆ. ಅರಣ್ಯ ಇಲಾಖೆ ಪ್ರಕರಣ ದಾಖಲಿಸಿ ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ.