ಮಲ್ಪೆ, ಡಿ 15 (DaijiworldNews/MS): ಬೀಚ್ ಆಸುಪಾಸಿನಲ್ಲಿ, ರಸ್ತೆ ಬದಿಗಳಲ್ಲಿ ಮಾರಾಟ ಮಾಡುವ ಮೀನಿನ ಆಹಾರ ಖಾದ್ಯಗಳಿಗೆ ಕೃತಕ ಬಣ್ಣ ಹಾಗೂ ರುಚಿ ಬರುವ ರಾಸಾಯನಿಕ ಸೇರಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರಸಭಾ ಪೌರಾಯುಕ್ತರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಮಲ್ಪೆ ಬೀಚ್ ಬಳಿ ಇರುವ ಹೊಟೇಲ್ ಗಳಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಮಲ್ಪೆ ಬೀಚ್ ಸುತ್ತಮುತ್ತಲು ಇಪ್ಪತ್ತಕ್ಕೂ ಅಧಿಕ ಮೀನಿನ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳಿದ್ದು, ಇಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸಿ ಇವುಗಳನ್ನು ತಿನ್ನುತ್ತಾರೆ. ರಸ್ತೆಯಂಚಿನಲ್ಲಿ ಮೀನಿನ ಫ್ರೈ, ಮಸಾಲ ಫ್ರೈ, ಚಿಕನ್ ಕಬಾಬ್, ಚೈನಿಸ್ ಆಹಾರಗಳ ಮಾರಾಟ ಮಾಡುವ ಹೊಟೇಲ್ಗಳಿವೆ. ಇಲ್ಲಿನ ಹೆಚ್ಚಿನ ಹೊಟೇಲ್ಗಳಲ್ಲಿ ಆಹಾರ ಪದಾರ್ಥಗಳಿಗೆ ಕೃತಕ ಬಣ್ಣ, ಅತೀಯಾದ ರುಚಿ ಬರುವ ರಾಸಾಯನಿಕ ಬೆರೆಸಿ ತಯಾರು ಮಾಡುತ್ತಾರೆ ಎಂದು ಬಹಳಷ್ಟು ಪ್ರವಾಸಿಗರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ತಕ್ಷಣ ಬೀಚ್ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಹಾಗೂ ಉಡುಪಿ ನಗರಸಭಾ ಪೌರಾಯುಕ್ತರಿಗೆ ದಾಳಿ ನಡೆಸಿ ಪರಿಶೀಲಿಸಲು ನಿರ್ದೇಶನ ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ನಗರಸಭೆಯ ಅಧಿಕಾರಿಗಳು ಆಹಾರ ಇಲಾಖೆಯ ಅಧಿಕಾರಿಗಳೊಂದಿಗೆ ದಾಳಿ ನಡೆಸಿದ್ದಾರೆ.
ದಾಳಿ ಸಂದರ್ಭದಲ್ಲಿ ಹೆಚ್ಚಿನ ಹೊಟೇಲ್ಗಳಲ್ಲಿ ಮಾನವನ ಜೀವಕ್ಕೆ ಹಾನಿಕಾರಕವಾಗುವ ಕೃತಕ ಬಣ್ಣ ಹಾಗೂ ರಾಸಾಯನಿಕ ಬಳಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಹೊಟೇಲ್ ಮಾಲಕರಿಗೆ ಎಚ್ಚರಿಕೆ ನೀಡಿರುವ ಪೌರಾಯುಕ್ತರು ಇನ್ನು ಮುಂದಿನ ದಿನಗಳಲ್ಲಿ ಆಹಾರ ಪದಾರ್ಥಗಳಿಗೆ ವಿಷಯುಕ್ತ ಬಣ್ಣ, ಟೆಸ್ಟೀ ಪೌಡರ್ ಬಳಕೆ ಮಾಡದಂತೆ ನಿರ್ದೇಶನ ನೀಡಿದ್ದಾರೆ.