ಉಳ್ಳಾಲ, ಏ 18(Daijiworld News/SM): ನಾಲ್ಕು ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಮತದಾನ ವಿಳಂಬ, ಬಿಜೆಪಿ ಪರ ಪೊಲೀಸ್ ಪೇದೆ ನಿಂತ ಆರೋಪ ಸೇರಿದಂತೆ ಗೊಂದಲಗಳ ನಡುವೆ ಮಂದಗತಿಯಲ್ಲಿ ಉಳ್ಳಾಲ ಭಾಗದಲ್ಲಿ ಮತದಾನ ನಡೆದಿದೆ. ಮಹಿಳಾ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಹೆಚ್ಚು ಮಹಿಳೆಯರೇ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.
ಕುಂಪಲ ಶಾಲೆಯ ಮತಗಟ್ಟೆಯಲ್ಲಿ 85ರ ಹರೆಯದ ಕೃಷ್ಣನಗರ ನಿವಾಸಿ ಬಂಟಪ್ಪ ಪೂಜಾರಿ ವಾಕಿಂಗ್ ಸ್ಟಿಕ್ ಹಿಡಿದುಕೊಂಡೇ ಮತಚಲಾಯಿಸಿದರು. ಅಪಘಾತದಲ್ಲಿ ನಡೆಯಲಾಗದ ಸ್ಥಿತಿಯಲ್ಲಿರುವ ಅವರ ಪುತ್ರ 30ರ ಹರೆಯದ ಅಶೋಕ್ ಪೂಜಾರಿ ಅವರನ್ನು ಸ್ಥಳೀಯ ಯುವಕರು ಎತ್ತಿಕೊಂಡು ಕರೆತಂದು ಹಕ್ಕು ಚಲಾಯಿಸಲು ಸಹಕರಿಸಿದರು.
ತೊಕ್ಕೊಟ್ಟು ಕಾಪಿಕಾಡು ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಬಿದ್ದು ಬೆನ್ನಿಗೆ ಗಾಯಗೊಂಡು ನಡೆಯಲಾಗದ ಸ್ಥಿತಿಯಲ್ಲಿರುವ ಹರ್ಷಿತ್ ಗಟ್ಟಿ ಅನ್ನುವ ಯುವಕನನ್ನು ಸ್ಥಳೀಯರೇ ಎತ್ತಿಕೊಂಡು ಕರೆತಂದು ಮತ ಚಲಾಯಿಸಲು ಸಹಕರಿಸಿದರು. ಉಳ್ಳಾಲದ ಬಿ.ಎಂ ಶಾಲೆಯ ಮತಗಟ್ಟೆಯಲ್ಲಿ ಕಾಪಿಕಾಡು ಗಟ್ಟಿ ಸಮಾಜಭವನದಲ್ಲಿ ಮದುವೆಯಾದ ಮೊಗವೀರಪಟ್ನದ ಅರ್ಚನಾ ಎಂಬ ಮದುಮಗಳು ಮದುವೆ ಬಳಿಕ ಮತದಾನದ ಹಕ್ಕು ಚಲಾಯಿಸಿದರು.
ಬಿಜೆಪಿಗೆ ಹೆಚ್ಚು ಮತ ಆರೋಪ: ಗೊಂದಲ
ಮತದಾನ ಆರಂಭವಾಗುವ ಮುನ್ನ ಇವಿಎಂ ಪ್ಯಾಡ್ನಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ತಲಾ ನಾಲ್ಕು ಮತಗಳನ್ನು ಪ್ರಾಯೋಗಿಕವಾಗಿ ಒತ್ತುವ ನಿಯಮವಿದೆ. ಮಂಗಳೂರು ಕ್ಷೇತ್ರದ ಕಲ್ಲಾಪು ಪಟ್ಲ ಮತಗಟ್ಟೆ 42 ರಲ್ಲಿ ಮತದಾನ ಆರಂಭವಾಗುವ ಮುನ್ನ ಎಲ್ಲಾ ಅಭ್ಯರ್ಥಿಗಳ ಪರವಾಗಿ ನಾಲ್ಕು ಮತಗಳನ್ನು ಪ್ರಾಯೋಗಿಕವಾಗಿ ಚಲಾಯಿಸಲಾಯಿತು. ಆದರೆ ಚಲಾವಣೆಗೊಂಡ ಮತದಲ್ಲಿ ಬಿಜೆಪಿಗೆ 6 ಮತಗಳು ಬಂದಿತ್ತು. ಇದರಿಂದ ಕಾಂಗ್ರೆಸ್ ಹಾಗೂ ಇತರೆ ಪಕ್ಷದ ಕಾರ್ಯಕರ್ತರು ಇವಿಎಂ ದೋಷ ಇರುವ ಕುರಿತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇವಿಎಂನ್ನು ಬಿಜೆಪಿಯಿಂದ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ಯಾಡ್ ಬದಲಾವಣೆಗೆ ಪಟ್ಟು ಹಿಡಿದರು. ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು ಎಂದು ಉಳ್ಳಾಲ ಪುರಸಭೆ ಮಾಜಿ ಕೌನ್ಸಿಲರ್ ಉಸ್ಮಾನ್ ಕಲ್ಲಾಪು ಹೇಳಿದರು.
ಮತದಾರರ ಸರ್ವೇ :ಸ್ಥಳೀಯರಿಂದ ತರಾಟೆ
ಉಳ್ಳಾಲದ ಧರ್ಮನಗರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ -18,19,20 ರ ಹೊರ ಆವರಣದಲ್ಲಿ ಇಬ್ಬರು ನಿಂತು ಮತದಾರರಿಂದ ಮಾಹಿತಿ ಪಡೆಯುತ್ತಿದ್ದರು. ಮತ ಚಲಾವಣೆ ಕುರಿತು ಮಾಹಿತಿ ಪಡೆದು ಬರೆಯುತ್ತಿರುವುದನ್ನು ಗಮನಿಸಿ ಸಂಶಯಗೊಂಡ ಸ್ಥಳೀಯರು, ` ಇಬ್ಬರು ಬಿಜೆಪಿ ಏಜೆಂಟರು, ಬಿಜೆಪಿಗೆ ಮತ ಹಾಕಿಸಲು ಬಂದವರೆಂದು' ಆರೋಪಿಸಿ ತರಾಟೆಗೆ ಪಡೆದುಕೊಂಡು ವಿಚಾರಣೆ ನಡೆಸಿದರು. ಇದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಉಳ್ಳಾಲ ಠಾಣೆಗೆ ಕರೆದೊಯ್ದರು. ಅಲ್ಲಿ ವಿಚಾರಣೆ ನಡೆಸಿದಾಗ ಇಬ್ಬರು ಖಾಸಗಿ ಏಜೆನ್ಸಿಯೊಂದರ ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಸುದ್ಧಿವಾಹಿನಿಗಾಗಿ ಮತದಾರರ ಸರ್ವೇ ನಡೆಸುತ್ತಿದ್ದವರೆಂದು ತಿಳಿಸಿದ್ದಾರೆ. ಇಬ್ಬರು ಯಾವುದೇ ಅನುಮತಿಯನ್ನು ಪಡೆದಿರಲಿಲ್ಲ.
ಇವಿಎಂ ಮೇಲೆ ಬಿದ್ದ ಮಹಿಳೆ, ವಿಳಂಬವಾದ ಮತದಾನ :
ಕೇರಳ ಗಡಿಭಾಗ ತಲಪಾಡಿಯ ನಾರ್ಲ ಪಡೀಲು ಮತಗಟ್ಟೆ ಸಂಖ್ಯೆ 169 ರಲ್ಲಿ ಇವಿಎಂ ಪ್ಯಾಡ್ ಮೇಲೆಯೇ ಮಹಿಳೆ ಬಿದ್ದುದರಿಂದಾಗಿ ಮತದಾನ ಪ್ರಕ್ರಿಯೆ ವಿಳಂಬವಾಯಿತು. ಅಸ್ವಸ್ಥ ಮಹಿಳೆ ಮತ ಚಲಾಯಿಸುತ್ತಿದ್ದಂತೆ ಪ್ಯಾಡ್ ಮೇಲೆಯೇ ಬಿದ್ದಿದ್ದರು. ಇದರಿಂದಾಗಿ ಇವಿಎಂ ಪ್ಯಾಡ್ ಕೆಟ್ಟು ಹೋಗಿ ಅರ್ಧ ಗಂಟೆ ಕಾಲ ಮತದಾನ ವಿಳಂಬವಾಯಿತು. ಮತದಾರರು ಸರತಿ ಸಾಲಿನಲ್ಲಿ ನಿಂತು ಇವಿಎಂ ಪ್ಯಾಡ್ ಬದಲಾವಣೆಗೊಳಿಸಿದ ನಂತರ ಮತ ಚಲಾಯಿಸಿದ್ದಾರೆ. ಇದೇ ರೀತಿ ಮತಗಟ್ಟೆ ಸಂಖ್ಯೆ- 171ರ ಶಾರದಾ ವಿದ್ಯಾನಿಕೇತನ ಶಾಲೆಯಲ್ಲಿ ಮಹಿಳೆಯೊಬ್ಬರು ಪ್ಯಾಡ್ ನಲ್ಲಿ ಶಬ್ದ ಬರಲಿಲ್ಲವೆಂದು ಎರಡೆರಡು ಬಾರಿ ಒತ್ತಿದ ಪರಿಣಾಮ ಅದು ಸ್ತಬ್ಧವಾಗಿ ಇಲ್ಲಿಯೂ ಕೆಲಕಾಲ ವಿಳಂಬವಾಯಿತು.
ಪೇದೆ ತರಾಟೆಗೆ ಪಡೆದ ಕಾಂಗ್ರೆಸ್ ಕಾರ್ಯಕರ್ತರು :
ಸೋಮೇಶ್ವರದ ಒಂಭತ್ತುಕೆರೆಯ ಮತಗಟ್ಟೆ ಸಂಖ್ಯೆ 21 ರ ಹೊರಭಾಗದಲ್ಲಿ ಕಾರ್ಯಕರ್ತರನ್ನು ಪ್ರಶ್ನಿಸಿದ ಪೊಲೀಸರನ್ನೇ ಸ್ಥಳೀಯರು ತರಾಟೆಗೆ ಪಡೆದುಕೊಂಡ ಘಟನೆ ನಡೆದಿದೆ. ಬಂದೋಬಸ್ತಿನಲ್ಲಿದ್ದ ಪೊಲೀಸ್ ಪೇದೆ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿ ಎಂದು ಹೇಳಿದರೆಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು. ತೊಕ್ಕೊಟ್ಟು ನಿವಾಸಿ ಕಾಂಗ್ರೆಸ್ ಕಾರ್ಯಕರ್ತರೋರ್ವರು ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ವಿನಂತಿಸಿಕೊಳ್ಳುತ್ತಿದ್ದರು. ಇದನ್ನು ಕರ್ತವ್ಯ ನಿರತ ಪೊಲೀಸ್ ಪೇದೆ ತರಾಟೆಗೆ ತೆಗೆದುಕೊಂಡಿದ್ದರು. ಪದೇ ಪದೇ ಮತಗಟ್ಟೆಗೆ ಬಂದು ಮತದಾರರಲ್ಲಿ ಮತಯಾಚನೆ ನಡೆಸದಂತೆ ಸೂಚಿಸಿದ್ದರು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿದ ಕಾರ್ಯಕರ್ತ, ಪೇದೆ ಬಿಜೆಪಿಗೆ ಮತ ಹಾಕುವಂತೆ ಹೇಳಿಕೊಡುತ್ತಿದ್ದಾರೆಂದು ತಿಳಿಸಿ ಸ್ಥಳೀಯರಲ್ಲಿ ಗೊಂದಲದ ವಾತಾವರಣ ಸೃಷ್ಟಿ ಮಾಡಿದರು. ಬಳಿಕ ಸ್ಥಳೀಯ ಠಾಣಾ ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ.