ಬಂಟ್ವಾಳ, ಡಿ 14 (DaijiworldNews/SK): ಗ್ರಾಹಕರಂತೆ ಅಂಗಡಿಯೊಂದಕ್ಕೆ ಬಂದು ಅಂಗಡಿ ಮಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಅಜ್ಜಿಬೆಟ್ಟು ಎಂಬಲ್ಲಿ ನಡೆದಿದೆ.
ಅಜ್ಜಿಬೆಟ್ಟು ಶಾಲಾ ಮೈದಾನದ ಬಳಿ ಇರುವ ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಚಿನ್ನದ ಸರ ಕಳೆದುಕೊಂಡಿರುವ ಮಹಿಳೆ.
ಸುಮಾರು 75 ಸಾವಿರ ಮೌಲ್ಯದ 1.50 ಪವನ್ ನ ಚಿನ್ನದ ಸರ ಕಳವಾಗಿದ್ದು, ಇಂದು ಮಧ್ಯಾಹ್ನ ಸುಮಾರು 2.45ರ ವೇಳೆಗೆ ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಹಾಲಕ್ಷ್ಮಿ ಸ್ಟೋರ್ ಮಾಲಕಿ ಸರೋಜಿನಿ ಅವರು ಇತ್ತೀಚೆಗೆ ಅಂಗಡಿಯನ್ನು ನವೀನ್ ಕುಲಾಲ್ ಎನ್ನುವವರಿಗೆ ಬಾಡಿಗೆಗೆ ನೀಡಿದ್ದರು. ನವೀನ್ ಕುಲಾಲ್ ಅವರು ಮಧ್ಯಾಹ್ನ ಊಟಕ್ಕೆ ಮನೆಗೆ ತೆರಳುವ ಸಂದರ್ಭ ಅಂಗಡಿಯಲ್ಲಿ ಮಾಲಕಿ ಸರೋಜಿನಿ ಅವರೇ ವ್ಯಾಪಾರವನ್ನು ನಡೆಸುತ್ತಿದ್ದರು. ಅದೇ ರೀತಿ ಇಂದು ಕೂಡ ನವೀನ್ ಊಟಕ್ಕೆ ತೆರಳಿದಾಗ ಸರೋಜಿನಿ ಅಂಗಡಿಯಲ್ಲಿದ್ದರು.
ಈ ವೇಳೆ ಹೆಲ್ಮೆಟ್ ಧರಿಸಿಕೊಂಡು ಬೈಕಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದು, ಅದರಲ್ಲಿ ಹಿಂಬದಿ ಸವಾರ ಅಂಗಡಿಗೆ ಬಂದು ವಿಮಲ್ ಹಾಗೂ ಚಾಕಲೇಟ್ ಪಡೆದುಕೊಂಡು 40 ರೂ ನೀಡಿದ್ದರು. ಗ್ರಾಹಕರಿಗೆ ಉಳಿದ ಚಿಲ್ಲರೆ ಹಣವನ್ನು ಮರುಪಾವತಿ ಮಾಡಲೆಂದು, ಕ್ಯಾಶ್ ಕೌಂಟರ್ ಗೆ ಬಗ್ಗಿದಾಗ ನಿಂತುಕೊಂಡಿದ್ದ ಅಪರಿಚಿತ ವ್ಯಕ್ತಿ ಸರೋಜಿನಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದುಕೊಂಡು ಬೈಕಿನಲ್ಲಿ ಕುಳಿತು ಪರಾರಿಯಾಗಿದ್ದಾರೆ ಎಂದು ಅವರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.