ಮೂಡುಬಿದಿರೆ, ಡಿ 14 (DaijiworldNews/MS): ಕರ್ನಾಟಕದ ಕರಾವಳಿಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಅಭಿವೃದ್ಧಿಗಾಗಿ 23 ವರ್ಷಗಳ ಹಿಂದೆ ವಿವಿಧ ಸಮುದಾಯದ ಗಣ್ಯರನ್ನು ಒಗ್ಗೂಡಿಸಿ ಸ್ಥಾಪಿಸಿದ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಈಗಾಗಲೇ ಸಾಗರೋತ್ತರದಲ್ಲಿ ಮಾತ್ರವಲ್ಲದೆ ಜಿಲ್ಲೆಗಳಲ್ಲಿಯೂ ಸಮಿತಿಯನ್ನು ಹೊಂದಿದ್ದು ಜಿಲ್ಲೆಗಳ ಸರ್ವತೋಮುಖ ಅಭಿವೃದ್ದಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ನೇತೃತ್ವದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಸಮಿತಿಯಿಂದ ವಿವಿಧ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಡಿ. 10 ರಂದು 'ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ' ದಲ್ಲಿ ಸಸಿಹಿತ್ಲು ಸಮುದ್ರ ತೀರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು 'ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ' ಬಗ್ಗೆ ಮಾತನಾಡುತ್ತಾ ಸಮಿತಿಯ ಸಾಧನೆ ಹಾಗೂ ಮುಂದಿನ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡುತ್ತಾ ತುಳುನಾಡಿದ ನೆಲ, ಜಲವನ್ನು ನಾವು ಸಂರಕ್ಷಿಸಬೇಕು. ಇಲ್ಲಿ ಉದ್ಯೋಗಗಳು ಸೃಷ್ಠಿಯಾಗಬೇಕು. ಜನ ಸಾಮಾನ್ಯರಿಗೆ ಸಾಂಪ್ರದಾಯಿಕ ಬದುಕಿನೊಂದಿಗೆ ಮೂಲಭೂತ ಸೌಕರ್ಯಗಳು ಸಿಗಬೇಕು. ಪರಿಸರವನ್ನು ರಕ್ಷಿಸುದರೊಂದಿಗೆ ಅವರವರ ಕುಲಕಸುಬುಗಳನ್ನು ಉಳಿಸಿ ಬೆಳೆಸಬೇಕು. ಸಮಿತಿಯು ಇಂದು ಸಮಾನ ಮನಸ್ಕರೊಂದಿಗೆ ಕೈಜೋಡಿಸಿ ಕಡಲ ತಡಿಯಿಂದಲೇ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಸ್ವಚ್ಛತಾ ಕಾರ್ಯವನ್ನು ನಡೆಸಲಾಗುವುದು. ಈ ಮೂಲಕ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಆದ್ಯತೆಯನ್ನು ನೀಡೋಣ ಎಂದರು.
ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ ಮಾತನಾಡಿ ಸ್ವಚ್ಛತಾ ಅಭಿಯಾನವನ್ನು ಕರಾವಳಿ ಭಾಗದಲ್ಲಿ ನಿತ್ಯ ನಿರಂತರವಾಗಿ ಮಾಡಲಾಗುವುದು. ಕಡಲ ತೀರವನ್ನು ಸ್ವಚ್ಛವಾಗಿ ಇಡುವುದರಿಂದ ವಿದೇಶಿಯರನ್ನು ಪ್ರವಾಸತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದಂತಾಗುತ್ತದೆ. ಇದರಿಂದ ಪ್ರವಾಸಿ ಕೇಂದ್ರಗಳು ಅಭಿವೃದ್ಧಿ ಹೊಂದುತ್ತವೆ. ಸಸಿಹಿತ್ಲು ಪರಿಸರದ ಕಡಲ ತೀರದಲ್ಲಿ ಶಾಶ್ವತ ತಡೆಗೋಡೆಗಳ ನಿರ್ಮಾಣವಾಗಬೇಕಾಗಿದೆ ಎಂದರು.
ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರುಣ್ ಪ್ರಕಾಶ್ ಶೆಟ್ಟಿ ಮಾತನಾಡುತ್ತಾ ಜಿಲ್ಲೆಯ ಕಡಲ ತೀರದಲ್ಲಿ ಸ್ವಚ್ಚತಾ ಅಭಿಯಾನ ವನ್ನು ಕೈಗೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಕೆಲಸವನ್ನು ಮಾಡಲಾಗುತ್ತದೆ ಎಂದರು.
ಸಸಿಹಿತ್ಲು ಯುವಕ ಮಂಡಲದ ಅಧ್ಯಕ್ಷ ದಿಲೀಪ್ ಕರ್ಕೇರಾ ಮಾತನಾಡಿ ಕಡಲತೀರವನ್ನು ಸ್ವಚ್ಛ ಮಾಡುವುದರೊಂದಿಗೆ ಈ ನಾಡಿನ ನೆಲ, ಜಲದ ಬಗ್ಗೆ ನಮಗೆ ಅರಿವು ಇರಬೇಕು. ಪರಿಸರದ ಸಂರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಬೇಕೆಂದರು.
ಹಳೆಯಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ, ಸದಸ್ಯೆ ಮಲ್ಲಿಕಾ, ಮೂಡುಬಿದಿರೆ ಜವನೆರ್ ಬೆದ್ರ ಸಂಘಟನೆಯ ಸ್ಥಾಪಕಾಧ್ಯಕ್ಷ, ಸಮಿತಿಯ ನೂತನ ಸ್ವಚ್ಛತಾ ರಾಯಭಾರಿ ಅಮರ್ ಕೋಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ತಿಂಗಳಾಯ, ಸಸಿಹಿತ್ಲು ಯುವತಿ ಮಂಡಲದ ಅಧ್ಯಕ್ಷೆ ಬಬಿತಾ ಮೋಹನ್, ಕಾರ್ಯದರ್ಶಿ ಅಮಿತಾ ಮಹೇಶ್, ಉಪಾಧ್ಯಕ್ಷೆ ಶಶಿಕಲಾ ಸತೀಶ್, ನವೋದಯ ಮಹಿಳಾ ಮಂಡಳಿಯ ಅಧ್ಯಕ್ಷೆ ಬಿ.ಕೋಟ್ಯಾನ್, ಯುವಕ ಮಂಡಲದ ಕಾರ್ಯದರ್ಶಿ ಯಶ್ವಿತ್ ಸಾಲ್ಯಾನ್ ಸಹಿತ ಸಸಿಹಿತ್ಲು ಪರಿಸರದ ನಿವಾಸಿಗಳು ಸಮುದ್ರ ತೀರದಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ಗ್ರಾಮ ಪಂಚಾಯತ್ ಹಳೆಯಂಗಡಿ, ಸಸಿಹಿತ್ಲು ಹಳೆ ವಿದ್ಯಾರ್ಥಿ ಸಂಘ(ರಿ), ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತ ಸಸಿಹಿತ್ಲು ಯುವಕ, ಯುವತಿ ಮಂಡಲ, ನವೋದಯ ಮಹಿಳಾ ಮಂಡಳಿ ಸಸಿಹಿತ್ಲು, ನೆಹರು ಯುವ ಕೇಂದ್ರ ಮಂಗಳೂರು ಮತ್ತು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಸ್ವಚ್ಛತಾ ಅಭಿಯಾನಕ್ಕೆ ಸಹಕರಿಸಿದರು.