ಮಂಗಳೂರು, ಡಿ 14(DaijiworldNews/RA):ನಕಲಿ ಆಧಾರ್ ಕಾರ್ಡ್ ಬಳಸಿ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಮತ್ತು ಬೆಂಗಳೂರಿನ 14 ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಉಡುಪಿ ಜಿಲ್ಲೆ ಕಳತ್ತೂರು ಚಂದ್ರನಗರದ ಉಮರಬ್ಬ ಮೊಹಿನುದ್ದೀನ್ (50) ಎನ್ನುವರ ಮೇಲೆ ಈ ಆರೋಪ ಕೇಳಿ ಬಂದಿದೆ.ಈತ ಅ. 30ರಂದು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಫ್ಟಿಎಸ್ಸಿ-1(ಪೋಕ್ಸೋ)ರ ವಿಚಾರಣೆಯಲ್ಲಿ ಪ್ರಕರಣದ ಆರೋಪಿಗಳಾದ ರಫೀಕ್, ಸಾರಮ್ಮ ಮತ್ತು ಆಯಿಷಾಬಾನುಗೆ ಜಾಮೀನು ಶ್ಯೂರಿಟಿ ನೀಡಿದ್ದಾರೆ
2022ರ ಜು. 26ರಂದು ಈತ ಬೇರೆ ಸಂಖ್ಯೆಯ ಆಧಾರ್ ಕಾರ್ಡ್ ಮೂಲಕ ಜಾಮೀನು ಶ್ಯೂರಿಟಿ ನೀಡಿದ್ದ. ಈತನ ದಾಖಲೆ ಪರಿಶೀಲನೆ ನಡೆಸಿದಾಗ ಈತ ವಿವಿಧೆಡೆ ಇದೇ ರೀತಿ 14 ಪ್ರಕರಣಗಳಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಜಾಮೀನು ಶ್ಯೂರಿಟಿ ನೀಡಿರುವುದು ಗೊತ್ತಾಗಿದೆ.
ಇಷ್ಟು ಮಾತ್ರವಲ್ಲ ಇತ್ತ ಮಂಗಳೂರಿನ ಕಸಬಾ ಬೆಂಗ್ರೆಯ ಮೊಯಿದ್ದೀನ್ ನಾಸೀರ್ (46) ನ. 6ರಂದು ಜಾಮೀನು ಶ್ಯೂರಿಟಿ ನೀಡಿದ್ದು ಈತನ ದಾಖಲೆಗಳ ಪರಿಶೀಲನೆ ವೇಳೆ ಬೇರೆ ಬೇರೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವ 5 ಮಂದಿಗೆ ನಕಲಿ ಆಧಾರ್ ಕಾರ್ಡ್ ಮತ್ತು ನಕಲಿ ಆರ್ಟಿಸಿ ಬಳಸಿ ಶ್ಯೂರಿಟಿದಾರನಾಗಿದ್ದಾರೆ ಎಂದು ತಿಳಿದು ಬಂದಿದೆ.