ಪುತ್ತೂರು, ಡಿ 12 (DaijiworldNews/AA): ತೆಂಗಿನ ಮರದ ಮೌಲ್ಯವರ್ಧನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ರೈತರಿಗಾಗಿ "ಕಲ್ಪವಿಕಾಸ ಯೋಜನೆ"ಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆ ಮಾಹಿತಿ ನೀಡಿದೆ.
ಈ ಬಗ್ಗೆ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ತೆಂಗು ಬೆಳೆಯು ಪ್ರಮುಖ ಸ್ಥಾನ ಪಡೆದಿದ್ದರೂ ಸಹ ನೈಸರ್ಗಿಕ ವಿಕೋಪಗಳು, ರೋಗಗಳು, ಆನೆಗಳ ದಾಳಿಯಿಂದ ಹಾನಿಗೊಳಗಾದ ತೆಂಗಿನ ಮರಗಳಿಗೆ ನ್ಯಾಯಯುತ ಪರಿಹಾರ ದೊರಕದೆ ರೈತರು ಕಂಗಾಲಾಗಿರುತ್ತಾರೆ. ಈ ನಿಟ್ಟಿನಲ್ಲಿ ಕಲ್ಪವಿಕಾಸ ಯೋಜನೆಯನ್ನು ಪ್ರಾರಂಭಿಸಿದ್ದು ಅನುತ್ಪಾದಕ ತೆಂಗಿನಮರಗಳನ್ನು ಖರೀದಿಸುವುದು ಮತ್ತು ಪುನರುಜ್ಜೀವನಕ್ಕೆ ಒತ್ತುಕೊಡುವುದು ನಮ್ಮ ಯೋಜನೆಯ ಒಂದು ಭಾಗವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆ, ಫಲಾನುಭವಿ ರೈತರಿಗೆ ತೆಂಗು ಬೆಳೆಯ ಸಮರ್ಪಕ ಕೃಷಿ ಮಾಹಿತಿಯ ಜೊತೆಗೆ ತೆಂಗಿನ ಸಸಿಗಳ ಪೂರೈಸುವುದರೊಂದಿಗೆ ಅಗತ್ಯ ಗೊಬ್ಬರ ಪೂರೈಕೆ ಮತ್ತು ತೆಂಗು ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು. ಅರ್ಹ ಅನುತ್ಪಾದಕ ತೆಂಗಿನ ಮರಗಳನ್ನು ಸಂಸ್ಥೆಯು ಈ ಯೋಜನೆ ಅಡಿ ಖರೀದಿಸಿ ಮೌಲ್ಯವರ್ಧನೆಗೊಳಿಸಲು ತೀರ್ಮಾನಿಸಿದ್ದು, ರೈತರು ತಮ್ಮಲ್ಲಿರುವ ಅನುತ್ಪಾದಕ ಹಾಗೂ ನೈಸರ್ಗಿಕವಾಗಿ ಹಾನಿಗೊಳಗಾದ ಮರಗಳನ್ನು ಪರಿಶೀಲಿಸಿ ಗರಿಷ್ಠ 2000 ರೂ. ವರೆಗಿನ ಪರಿಹಾರವನ್ನು ಪಡೆಯಬಹುದು. ರೈತರು ತಮ್ಮ ತೆಂಗು ಕೃಷಿ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಹಾಗೂ ಸಬಲೀಕರಣಕ್ಕಾಗಿ ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳಲು ಈ ಅನನ್ಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಸ್ಥೆಯು ವಿನಂತಿ ಮಾಡಿಕೊಂಡಿದೆ.
ಇನ್ನು ಸುದ್ದಿಗೋಷ್ಟಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕುಸುಮಾಧರ್ ಎಸ್.ಕೆ, ಸಿಇಒ ಚೇತನ್ ಎ, ನಿರ್ದೇಶಕರಾದ ಲತಾ, ಸಲಹಾ ಸಮಿತಿಯ ಸದಸ್ಯರಾದ ಡಾ ರಾಜೇಶ್ ಬೆಜ್ಜಂಗಳ, ಕುಮಾರ್ ಪೆರ್ನಾಜೆ ಉಪಸ್ಥಿತರಿದ್ದರು.
ಕಲ್ಪವಿಕಾಸ ಯೋಜನೆಗೆ ನೋಂದಣಿ ಮಾಡುವುದು ಹೇಗೆ?
ಕಲ್ಪವಿಕಾಸ ಯೋಜನೆಗೆ ಆನ್ ಲೈನ್ ನೋಂದಣಿ ಈಗಾಗಲೇ ಆರಂಭವಾಗಿದ್ದು, ಡಿಸೆಂಬರ್ 23ಕ್ಕೆ ಕೊನೆಯ ದಿನಾಂಕವಾಗಿದೆ. ಈ ಕೆಳಗೆ ನೀಡಿರುವ ವೆಬ್ ಸೈಟ್ ಲಿಂಕ್ ಮೂಲಕ ಯಾವ ಶುಲ್ಕವಿಲ್ಲದೆ ಉಚಿತವಾಗಿ ರೈತರು ನೋಂದಾವಣೆಗೊಳಿಸಬಹುದು. ಹಾಗೂ ಹೆಚ್ಚಿನ ಮಾಹಿತಿಗೆ ಯೋಜನೆಯ ಟೋಲ್ ಫ್ರೀ ಸಂಖ್ಯೆ: 18002030129 ಕರೆ ಮಾಡಬಹುದಾಗಿದೆ.
ಆನ್ ಲೈನ್ ಲಿಂಕ್: https://zfrmz.com/FMLTyJxWKIQSAoyIjsuz