ಮಂಗಳೂರು, ಡಿ 12 (DaijiworldNews/AA): ಮನೆಯಲ್ಲಿದ್ದ ಮಗ ನಾಪತ್ತೆಯಾಗಿ 43 ದಿನಗಳು ಕಳೆದಿದ್ದು, ಬರುವಿಕೆಗಾಗಿ ತಾಯಿ ಕಣ್ಣೀರು ಸುರಿಸುತ್ತಾ ಕಾದು ಕುಳಿತಿರುವ ಮನಕಲಕುವ ಘಟನೆ ಮಂಗಳೂರಿನ ಶಕ್ತಿನಗರದ ಪ್ರಶಾಂತಿ ನಗರದಲ್ಲಿ ವರದಿಯಾಗಿದೆ.
ಪ್ರಶಾಂತಿ ನಗರದ 5ನೇ ಅಡ್ಡರಸ್ತೆ ನಿವಾಸಿ ಪ್ರಣಮ್ (30) ನಾಪತ್ತೆಯಾಗಿರುವ ಯುವಕ.
ಮನೆಯ ಆಧಾರವಾಗಬೇಕಿದ್ದ ಪ್ರಣಮ್, ನಾಪತ್ತೆಯಾಗಿರುವುದು ಮನೆಯವರ ಆತಂಕಕ್ಕೆ ಕಾರಣವಾಗಿದೆ. ಪ್ರಣಮ್ ಕಾಣೆಯಾದ ದಿನ ಅವರಿಗಾಗಿ ತಾಯಿ ಉಮಾವತಿ ಅವರು, ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಮಗನ ಸುಳಿವು ದೊರೆತಿರಲಿಲ್ಲ. ಕೊನೆಗೆ 2 ದಿನಗಳ ಬಳಿಕ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಪ್ರಣಮ್ ಕಾಣೆಯಾಗಿ 43 ದಿನಗಳು ಕಳೆದರೂ ಈವರೆಗೆ ಸುಳಿವು ಲಭ್ಯವಾಗದ ಹಿನ್ನಲೆ ಮಗನನ್ನು ಹುಡುಕಿಕೊಡುವಂತೆ ತಾಯಿ ಉಮಾವತಿ ಅವರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಶೋರೂಂ ಒಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಪ್ರಣಮ್ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಬಿಟ್ಟು ಹೋಗಿದ್ದಾರೆ. ಈ ಬಗ್ಗೆ ವ್ಯಕ್ತಿಯೊಬ್ಬರು ತಾಯಿಗೆ ಮಾಹಿತಿ ನೀಡಿದ್ದು, ಬಳಿಕ ಅವರು ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಸಂಬಂಧಿಕರಲ್ಲಿಯೂ ಮಗ ನಾಪತ್ತೆಯಾಗಿರುವ ಬಗ್ಗೆ ವಿಚಾರಿಸಿದ್ದು, ಸುಳಿವು ಸಿಗದೆ ಹತಾಶರಾಗಿದ್ದಾರೆ.
ಯುವಕ ಪ್ರಣಮ್ ಕಾಣೆಯಾಗಿರುವ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಪ್ರಣಮ್ ಬಗ್ಗೆ ಯಾರಿಗಾದರೂ ಯಾವುದೇ ಸುಳಿವು ದೊರೆತಲ್ಲಿ 9535429631 ಅಥವಾ 7892490460 ಅಥವಾ 9743484708 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.