ಮಂಗಳೂರು,ಏ 18 (Daijiworld News/MSP): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಸೇರಿದಂತೆ ಹಲವು ಕಡೆಗಳಲ್ಲಿ ಆಸ್ಪತ್ರೆಗಳಲ್ಲಿ ನಾನಾ ಕಾ ಯಿಲೆಗೆ ದಾಖಲಾಗಿರುವ ರೋಗಿಗಳು ನಿಗದಿತ ಮತಗಟ್ಟೆಗಳಿಗೆ ತೆರಳಿ ತಮ್ಮ ಹಕ್ಕು ಚಲಾಯಿಸಿರುವುದು ವಿಶೇಷ.
ಅದರಲ್ಲಿಯೂ ಮಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ ಮತದಾರರೊಬ್ಬರು ತೀರಾ ಅಸ್ವಸ್ಥರಾಗಿದ್ದರು. ಆದರೆ, ಅವರನ್ನು ವೀಲ್ಚೇರ್ನಲ್ಲಿ ಆಕ್ಸಿಜನ್ ಕಿಟ್ನೊಂದಿಗೆ ಮತಗಟ್ಟೆಗೆ ಕರೆತಂದು ಮತದಾನ ಮಾಡಿಸಲಾಯಿತು. ಆ ಮೂಲಕ, ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಕೂಡ ತಮ್ಮ ಹಕ್ಕು ಚಲಾವಣೆ ಮಾಡಿ ಪ್ರಜಾಪ್ರಭುತ್ವವನ್ನು ಗೆಲ್ಲಿಸುತ್ತಿರುವುದು ಶ್ಲಾಘನೀಯ.
ಇನ್ನು ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವವರು ಪ್ರತಿ ಬಾರಿಯೂ ಮತದಾನದಿಂದ ವಂಚಿತರಾಗುತ್ತಾರೆ. ಆದರೆ, ಈ ಬಾರಿ ಒಳರೋಗಿಗಳಾಗಿ ದಾಖಲಾದ ಕೆಲವರು ಮತ ಚಲಾಯಿಸುವ ಮೂಲಕ ಅನಾರೋಗ್ಯದ ನಡುವೆಯೂ ಮತದಾನದ ಮಹತ್ವವನ್ನು ತೋರಿಸಿ ಕೊಡುವ ಮೂಲಕ ಸಮಾಜಕ್ಕೆ ಮಾದರಿಯಾದರು. ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಾದ ಕೆಎಂಸಿ ಆಸ್ಪತ್ರೆ, ಫಾದರ್ ಮುಲ್ಲರ್ ಆಸ್ಪತ್ರೆ, ಎಜೆ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವವರು ತಮ್ಮ ಮತಗಟ್ಟೆಗಳಿಗೆ ಹೋಗಿ ಮತದಾನವನ್ನು ಮಾಡಿದರು. ತೀರಾ ಅಶಕ್ತರಾದ ರೋಗಿಗಳನ್ನು ಆಂಬ್ಯುಲೆನ್ಸ್ಗಳಲ್ಲಿ ಮತಗಟ್ಟೆಗಳಿಗೆ ಕರೆದುಕೊಂಡು ಹೋಗಲಾಯಿತು.