ಕುಲಶೇಖರ ಕೊರ್ಡೆಲ್ ನ ಹೋಲಿ ಕ್ರಾಸ್ ಚರ್ಚ್ ನಲ್ಲಿ ಸಂಸ್ಥಾಪಕರ ದಿನಾಚರಣೆ
Mon, Dec 11 2023 09:15:52 PM
ಕುಲಶೇಖರ, ಡಿ. 11(DaijiworldNews/SK): ಕೊರ್ಡೆಲ್ನ ಹೋಲಿ ಕ್ರಾಸ್ ಚರ್ಚ್ನ ಸಂಸ್ಥಾಪಕ ಫ್ರಾದ್ ಸ್ವಾಮಿಯವರ ೧೪೬ನೇ ಪುಣ್ಯ ಸ್ಮರಣೆಯನ್ನು ಕೊರ್ಡೆಲ್ ಚರ್ಚ್ ಮೈದಾನದಲ್ಲಿ ಪವಿತ್ರ ಬಲಿಪೂಜೆಯೊಂದಿಗೆ ಆಚರಿಸಲಾಯಿತು.
ಮಂಗಳೂರು ಕ್ಯಾಥೋಲಿಕ ಧರ್ಮಪ್ರಾಂತ್ಯದ ಬಿಷಪ್ ಅತೀ ವಂ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು. ಯೇಸು ಕ್ರಿಸ್ತರ ಶಿಲುಭೆಯ ಮೂಲಕ ನಮ್ಮೆಲ್ಲರ ಸಂರಕ್ಷಣೆಯಾಗಿದೆ. ಫ್ರಾದ್ ಅವರು ಈ ಮಣ್ಣು ಪವಿತ್ರಗೊಳಿಸಿದ್ದಾರೆ. ಅವರ ತ್ಯಾಗ, ಪರಿಶ್ರಮದಿಂದ ಈ ಜಾಗದಲ್ಲಿ ಇಂತಹ ಕ್ಷೇತ್ರ ತಲೆ ಎತ್ತಲು ಕಾರಣವಾಗಿದೆ. ಅಂತಹ ಸಂಸ್ಥಾಪಕರ ಸ್ಮರಣೆ ಪ್ರಸ್ತುತ ಎಂದರು.
ತಂದೆ ತಾಯಿಗಳನ್ನು ಗೌರವಿಸುವವರು ದೇವರ ಆಶಿರ್ವಾದಕ್ಕೆ ಕಾರಣರಾಗುತ್ತಾರೆ. ತಪ್ಪುಗಳಾಗುವ ಸಂದ‘ದಲ್ಲಿ ಅವುಗಳನ್ನು ತಿದ್ದುವ ಕೆಲಸವಾಗಬೇಕು. ದೇವರ ವಾಕ್ಯ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ಪರೋಪಕಾರಿಯಾಗುವ ವ್ಯಕ್ತಿಗಳಾಗೋಣ ಎಂದು ಅವರು ಆಶಿರ್ವಚನ ನೀಡಿದರು.
ಕೊರ್ಡೆಲ್ ಚರ್ಚ್ನ ಪ್ರಧಾನ ಧರ್ಮಗುರು ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಸಹಾಯಕ ಧರ್ಮಗುರುಗಳಾದ ಫಾ| ಐವನ್ ಕಾರ್ಡೆರೊ ಮತ್ತು ಫಾ| ಪಾವ್ಲ್ ಡಿಸೋಜಾ ಸೇರಿದಂತೆ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಕ್ಷೇತ್ರದ ೨೪ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು. ಭಕ್ತಾಧಿಗಳಿಗೆ ಸಹ ಭೋಜನೆ ವ್ಯವಸ್ಥೆ ಮಾಡಲಾಗಿತ್ತು .ಸರಿ ಸುಮಾರು ಐದು ಸಾವಿರ ಜನರು ಇದರಲ್ಲಿ ಪಾಲ್ಗೊಂಡರು.
ಡೀಕನ್ ನಾರ್ಮನ್ ಮಥಿಯಾಸ್, ಪಾಲನ ಸಮಿತಿ ಉಪಾಧ್ಯಕ್ಷೆ ರುತ್ ಕ್ಯಾಸ್ಟೆಲಿನೊ, ಕಾರ್ಯದರ್ಶಿ ಅನಿಲ್ ಡೆಸಾ ಉಪಸ್ಥಿತರಿದ್ದರು.