ಬಂಟ್ವಾಳ, ಡಿ 10 (DaijiworldNews/MS): ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ಅವರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇರಲಿಲ್ಲ, ಅಂದು ಕೆಲವರು ತಪ್ಪು ಮಾಹಿತಿ ನೀಡಿ ನನ್ನನ್ನು ದಾರಿ ತಪ್ಪಿಸಿದ್ದರು. ಅದಕ್ಕೆ ವಿಷಾದವಿದೆ ಇಂದು ನನ್ನ ಕಣ್ಣು ತೆರೆದಿದೆ ಎಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿಶನಿವಾರ ನಡೆದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿದ ಕುಮಾರಸ್ವಾಮಿ ಅವರು ಪ್ರಭಾಕರ ಭಟ್ ಅವರ ಗುಣಗಾನ ಮಾಡಿದರು.
"ರಾಷ್ಟ್ರ ಭಕ್ತಿಯ ಜತೆಗೆ ರಾಮ ಭಕ್ತಿ, ಚಂದ್ರಯಾನ 3 ಉಡಾವಣೆ ಮರುಸೃಷ್ಟಿ , ಹುತಾತ್ಮ ಯೋಧ ಕ್ಯಾಪ್ಟನ್ ಪ್ರಾಂಜಲ್ಗೆ ಪುಷ್ಪ ನಮನ ಹೊನಲು ಬೆಳಕಿನಲ್ಲಿ ಮಕ್ಕಳ ಸಾಹಸ ಪ್ರದರ್ಶನವನ್ನು ವೀಕ್ಷಿಸಿ ಇಂದು ಇಲ್ಲಿ ಭಾಗವಹಿಸಿರುವುದು ನನ್ನ ಭಾಗ್ಯ. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ , ಜ್ಞಾನ ವಿಕಾಸದ ಜತೆ ಎಲ್ಲಾ ರೀತಿಯ ವಿಕಾಸ ಇಲ್ಲಿ ಆಗುತ್ತಿದೆ ಎಂದು ಹೇಳಿದರು.
ನಮ್ಮ ಶಾಲಾ ದಿನಗಳಲ್ಲಿ ಮಾಡುತ್ತಿದ್ದ ರಾಮ ಭಜನೆ ಮತ್ತೆ ನೆನಪಿಸಿಕೊಂಡ ಅವರು, ಪ್ರಭಾಕರ್ ಭಟ್ ಅವರು ಸರ್ಕಾರಕ್ಕೆ ಕಣ್ಣು ತೆರೆಸುವ ರೀತಿಯಲ್ಲಿ ಅವರು ಶಾಲೆ ನಡೆಸುತ್ತಿದ್ದಾರೆ. ನಾನು ಈ ಹಿಂದೆ ಅವರ ಬಗ್ಗೆ ಮಾಡಿದ್ದ ಟೀಕೆ ಬೇರೆ, ಈಗಿನ ಹೊಗಳಿಕೆ ಬೇರೆ. ಇಲ್ಲಿಗೆ ಬಂದ ಮೇಲೆ ನನಗೆ ನಿಜ ವಿಚಾರ ಗೊತ್ತಾಗಿದೆ. ಅಂದು ದಾರಿ ತಪ್ಪಿದ್ದೆ ಎನ್ನುವುದನ್ನು ಪ್ರಾಮಾಣಿಕವಾಗಿ ಒಪ್ಪುತ್ತೇನೆ. ಈ ಕಾರ್ಯಕ್ರಮಕ್ಕೆ ಬಾರದೇ ಇದ್ದರೆ ಜೀವನದ ದೊಡ್ಡ ನಷ್ಟವಾಗುತ್ತಿತ್ತು. ಗ್ರಾಮೀಣ ಪ್ರದೇಶದ ಕಲೆಗಳನ್ನು ಮಕ್ಕಳಲ್ಲಿ ಮಾಡಿಸಿದ್ದಾರೆ ಎಂದು ಹೇಳಿದ ಅವರು “ಜೈ ಶ್ರೀರಾಮ್” ಎಂದು ಘೋಷಣೆ ಕೂಗುವ ಮೂಲಕ ಭಾಷಣ ಮುಗಿಸಿದರು.