ಬಂಟ್ವಾಳ : ವಿವಾಹದ ವಿಚ್ಚೇದನ ಪ್ರಕ್ರಿಯೆ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವಾಗಲೇ ಪತಿಗೆ ತಿಳಿಯದಂತೆ ಪತ್ನಿ ಎರಡನೇ ವಿವಾಹದ ಹಿನ್ನಲೆಯಲ್ಲಿ ಮಂಗಳೂರಿನ ಕೌಟುಂಬಿಕ ನ್ಯಾಯಾಲಯವು ಆಕೆಯ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದೆ.
ಪಣಕಜೆ, ಮಂಡಾಡಿ ನಿವಾಸಿ ಉದಯ ನಾಯಕ್ ಅವರು ಮಂಗಳೂರು ಮೇರಿಹಿಲ್ ನ ಅನಿತಾ ನಾಯಕ್ ಎಂಬುವವರನ್ನು2018ರಲ್ಲಿ ಮದುವೆಯಾಗಿದ್ದು, ಬಳಿಕ ಇವರ ದಾಂಪತ್ಯದಲ್ಲಿ ಕೆಲ ಅಡೆತಡೆಗಳು ಬಂದ ಹಿನ್ನಲೆಯಲ್ಲಿ ಉದಯ ನಾಯಕ್ ಅವರು ನ್ಯಾಯಾಲಯದಲ್ಲಿ ಡೈವೋರ್ಸ್ ಪಿಟಿಷನ್ ಸಲ್ಲಿಸಿದ್ದರು.
ಈ ವ್ಯಾಜ್ಯವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗಲೇ ಅನಿತಾ ನಾಯಕ್ ಅವರು ಗೌಪ್ಯವಾಗಿ ಎರಡನೇ ವಿವಾಹವಾಗುತ್ತಿದ್ದಾಳೆಂದು ಪತಿ ಬೆಳ್ತಂಗಡಿ ಸಿಜೆ ಮತ್ತು ಜೆಎಮ್ಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಪಿರ್ಯಾದು ಸಲ್ಲಿಸಿದ್ದರು.ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸಿ ವರದಿ ಸಲ್ಲಿಸುವಂತೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ಅಧಿಕಾರಿಗೆ ಸೂಚಿಸಿತ್ತು.
ತನ್ಮಧ್ಯ ಉದಯ್ ನಾಯಕ್ ಅವರಿಂದ ಜೀವನಾಂಶವನ್ನು ಕೋರಿ ಪತ್ನಿಅನಿತಾ ನಾಯಕ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಸಂದರ್ಭ ನ್ಯಾಯಾಲಯದ ಆದೇಶದಂತೆ ಉದಯ್ ನಾಯಕ್ ಅವರು ಪತ್ನಿಗೆ ನಿರ್ವಹಣಾ ಪಾವತಿಯಾಗಿ 15 ಸಾ. ರೂ.ವಿನ ಡಿಮ್ಯಾಂಡ್ ಡ್ರಾಫ್ಟನ್ನು ನೀಡಿದ್ದರು.
ಪತ್ತೆದಾರಿಗಿಳಿದ ಪತಿ:
ಪತ್ನಿ ಗೌಪ್ಯವಾಗಿ ಎರಡನೇ ವಿವಾಹವಾಗಿರುವುದನ್ನು ಖಚಿತಪಡಿಸುವ ನಿಟ್ಟಿನಲ್ಲಿ ಪತಿ ಉದಯನಾಯಕ್ ಖುದ್ದು ಪತ್ತೆದಾರಿಗೆ ಮುಂದಾದರು. ಪತ್ನಿ ಅನಿತಾ ನಾಯಕ್ 2023 ರ ಮಾರ್ಚ್ 13 ರಂದು ಮುಂಬೈನ ಡೊಂಬಿವಲಿಯ ಲೋಧಾ ಪ್ಯಾನೇಸಿಯಾದಲ್ಲಿ ಹರಿಕೃಷ್ಣ ಗಣಪತ್ ರಾವ್ ಕೀಲು ಎಂಬವರೊಂದಿಗೆ ಎರಡನೇ ವಿವಾಹವಾಗಿದ್ದು ಈ ಬಗ್ಗೆ ಮಹಾರಾಷ್ಟ್ರ ಶಾಸನ ರಾಜಪತ್ರದ ಮಾರ್ಚ್ 16-22ರ 2023 ಆವೃತ್ತಿ ಯಲ್ಲಿ ಪ್ರಕಟಗೊಂಡಿರುವ ದಾಖಲೆಯ ಮೂಲಕ ದೃಢಪಡಿಸಿಕೊಂಡ ಉದಯನಾಯಕ್ ಅವರಿಗೆ ಅಚ್ಚರಿ ಕಾದಿತ್ತು.
ಅನಿತಾನಾಯಕ್ ತನ್ನ ಹೆಸರನ್ನು ಅನಿತಾ ಹರಿಕೃಷ್ಣ ಕೀಲು ಎಂದು ಬದಲಾಯಿಸಿಕೊಂಡಿದ್ದರು.ಇವರ ಎರಡನೇ ವಿವಾಹವು 2022 ರ ಡಿ.27 ರಂದೇ ನಡೆದಿತ್ತು ಎಂಬ ವಿಚಾರ ಮಹಾರಾಷ್ಟ್ರ ಗೆಜೆಟ್ ಕಚೇರಿಗೆ ಸಲ್ಲಿಸಿದ ಪ್ರಮಾಣಪತ್ರದ ಪ್ರಕಾರ ಬೆಳಕಿಗೆ ಬಂದಿದೆ.
ಅನಿತಾ ಅವರ ಎರಡನೇ ವಿವಾಹದ ಛಾಯಾಚಿತ್ರಗಳನ್ನು ಆಕೆಯ ಸಂಬಂಧಿಯೋರ್ವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.
ಅಶ್ಚರ್ಯವೆಂದರೆ ಜೀವನಾಂಶ ಪಡೆಯಲು ಅನಿತಾಳ ತಂದೆ ರಾಮಚಂದ್ರ ನಾಯಕ್ ತನ್ನ ಸಂಬಂಧಿಯ ಜೊತೆ ಮಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕಾಗಮಿಸುತ್ತಿದ್ದರೆನ್ನಲಾಗಿದೆ.
ಉದಯ್ ನಾಯಕ್ ಅವರು ತನ್ನ ಪತ್ನಿ ಅನಿತಾ ನಾಯಕ್ ಎರಡನೇ ವಿವಾಹವಾದ ಕುರಿತಂತೆ ಛಾಯಾಚಿತ್ರಗಳ ಸಮೇತ ಪ್ರಕಟವಾದ ಮಹಾರಾಷ್ಟದ ಗೆಜೆಟ್ ಅನ್ನು ಕೌಟುಂಬಿಕ ನ್ಯಾಯಾಲಯಕ್ಕೆ ಪುರಾವೆಯಾಗಿ ಸಲ್ಲಿಸಿದರು. ಇದರ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರು ಈ ಪುರಾವೆಗಳನ್ನು ಅಂಗೀಕರಿಸಿದಲ್ಲದೆ ಅನಿತಾಳಿಗೆ ನಿರ್ವಹಣೆಗಾಗಿ ನೀಡಲಾಗುತ್ತಿದ್ದ ಜೀವನಾಂಶವನ್ನು ರದ್ದುಗೊಳಿಸಿ ಆದೇಶವನ್ನು ಹೊರಡಿಸಿದ್ದಾರೆ. ಹಾಗೆಯೇ ಅನಿತಾ ನಾಯಕ್ ಅವರ ಎರಡನೇ ವಿವಾಹಕ್ಕೆ ಸಂಬಂಧಿಸಿದಂತೆ ಉದಯ್ ನಾಯಕ್ ಅವರ ಅರ್ಜಿಯ ಹೆಚ್ಚಿನ ತನಿಖೆಗೂ ನಿರ್ದೇಶಿಸಿದ್ದಾರೆ.