ಮಂಗಳೂರು, ಎ18(Daijiworld News/SS): ಕರಾವಳಿ ಜಿಲ್ಲೆಗಳ ಯುವಕರು ದುಬೈ, ಕತಾರ್, ಕುವೈಟ್, ಸೌದಿ-ಅರೇಬಿಯಾ ಸೇರಿದಂತೆ ವಿದೇಶದಲ್ಲಿ ದುಡಿಯುತ್ತಿದ್ದು ಅವರಲ್ಲಿ ಕೆಲವರು ತಾಯ್ನಾಡಿನಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಗೆ ಬಂದಿದ್ದಾರೆ. ಈಗಾಗಲೇ ಕೆಲವರು ತಾವು ಮತದಾನಕ್ಕೆ ಬರುವ ಇಂಗಿತ ವ್ಯಕ್ತಪಡಿಸಿ ತಮ್ಮ ವಿಮಾನಯಾನ ಟಿಕೆಟನ್ನು ವಾಟ್ಸ್ಯಾಪ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟದಲ್ಲದೆ, ಎಲ್ಲರೂ ಮತದಾನ ಮಾಡುವಂತೆ ಸಂದೇಶ ನೀಡಿದ್ದಾರೆ.
ಈ ನಡುವೆ ತಮ್ಮ ಹಕ್ಕನ್ನು ಚಲಾಯಿಸುವುದಕ್ಕೆ ಮತದಾರರೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಸೈಕಲ್ ಯಾತ್ರೆ ಮಾಡಿ ಇತರ ಮತದಾರರಿಗೆ ಮಾದರಿಯಾಗಿದ್ದಾರೆ.
ಮಂಗಳೂರು ಸಮೀಪದ ವಾಮಂಜೂರಿನ ಅನಿಕೇತ್ ಜೆ. ಬೆಂಗಳೂರಿನಿಂದ ಮಂಗಳೂರಿಗೆ ಮತದಾನಕ್ಕಾಗಿ ಸೈಕಲ್ ಮೂಲಕ ಯಾತ್ರೆ ಕೈಗೊಂಡ ಯುವಕ. ಸೈಕಲ್ ಮೂಲಕವೇ ಸುಮಾರು 360 ಕಿ.ಮೀ. ದೂರವನ್ನು ಕ್ರಮಿಸಿ ಅನಿಕೇತ್ ಜೆ. ಮಂಗಳೂರು ತಲುಪಿದ್ದಾರೆ.
ಅನಿಕೇತ್ ಬೆಂಗಳೂರಿನಲ್ಲಿ ಆ್ಯಡ್ ಸಿಂಡಿಕೇಟ್ ಸಂಸ್ಥೆಯ ಉದ್ಯೋಗಿಯಾಗಿದ್ದು, ಸೈಕಲ್ ಯಾತ್ರೆ ಕೈಗೊಂಡು ತಮ್ಮ ಹಕ್ಕು ಚಲಾಯಿಸಿ ಮತದಾನ ಮಾಡುವುದರಿಂದ ತಪ್ಪಿಸಿಕೊಳ್ಳುವವರಿಗೆ ಮಾದರಿಯಾಗಿದ್ದಾರೆ.
ಮುಂಬಯಿ, ಬೆಂಗಳೂರು, ಚೆನ್ನೈ ಮಾತ್ರವಲ್ಲದೆ ವಿದೇಶಗಳಲ್ಲಿ ಉದ್ಯೋಗ ನಿಮಿತ್ತ ಇದ್ದವರಲ್ಲಿ ಅನೇಕ ಮಂದಿ ಮತದಾನಕ್ಕಾಗಿ ಊರಿಗೆ ಬಂದಿದ್ದಾರೆ. ಇದು ಹಬ್ಬ, ಜಾತ್ರೆ, ರಜೆ ಸೀಸನ್ ಆಗಿರುವುದರಿಂದ ಅವುಗಳ ಜತೆಗೆ ಮತದಾನ ಹಬ್ಬದಲ್ಲಿಯೂ ಪಾಲ್ಗೊಳ್ಳುವ ಉದ್ದೇಶದಿಂದಲೂ ಬಂದವರು ಅನೇಕ ಮಂದಿ. ತಮ್ಮ ಮನೆಯಲ್ಲಿರುವ ಹಿರಿಯರನ್ನು ಮತದಾನ ಕೇಂದ್ರಗಳಿಗೆ ಕರೆದೊಯ್ಯುವುದಕ್ಕೆ ಅನೇಕರು ಉತ್ಸುಕರಾಗಿದ್ದಾರೆ.