ಕಾಸರಗೋಡು , ಡಿ 9(DaijiworldNews/AK): ನಿಯಂತ್ರಣ ತಪ್ಪಿದಾಗ ಪಾರಾಗಲು ಟಿಪ್ಪರ್ ಲಾರಿಯಿಂದ ಹಾರಿದ ಚಾಲಕ ಅದೇ ಲಾರಿಯಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ ಶನಿವಾರ ಮುಂಜಾನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಗೋಳಿಯಡ್ಕ ಎಂಬಲ್ಲಿ ನಡೆದಿದೆ.
ಚರ್ಲಡ್ಕ ಎದುರ್ತೋಡಿ ನ ನೌಫಲ್ ( 24) ಮೃತಪಟ್ಟವರು. ಮರಳು ಹೇರಿಕೊಂಡು ಬರುತ್ತಿದ್ದ ಲಾರಿ ಗೋಳಿಯಡ್ಕ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ತಪ್ಪಿದ್ದು , ಈ ಸಂದರ್ಭದಲ್ಲಿ ಚಾಲಕ ಹೊರ ಹಾರಿದ್ದಾರೆ.
ಈ ಸಂದರ್ಭದಲ್ಲಿ ಲಾರಿಯಡಿಗೆ ಸಿಲುಕಿದ ನೌಫಲ್ ಗಂಭೀರ ಗಾಯಗೊಂಡಿದ್ದು , ಪರಿಸರವಾಸಿಗಳು ಕುಂಬಳೆಯ ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಲಾಗಲಿಲ್ಲ . ನಿಯಂತ್ರಣ ತಪ್ಪಿದ ಲಾರಿ ಗೋಳಿಯಡ್ಕ ದ ಖಾಸಗಿ ವ್ಯಕ್ತಿಯೋರ್ವರ ಮನೆಯ ಸಮೀಪದ ಮಣ್ಣಿನ ಗೋಡೆಗೆ ಬಡಿದಿದೆ. ಶಬ್ದ ಕೇಳಿ ಪರಿಸರವಾಸಿಗಳು ಬಂದು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ನಡುವೆ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯನ್ನು ಪೊಲೀಸರು ಹಿಂಬಾಲಿಸಿದ್ದರು . ಇದರಿಂದ ಅಪಘಾತ ನಡೆಯಲು ಕಾರಣ ಎಂದು ನಾಗರಿಕರು ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.
ಪೊಲೀಸರು ಬೆನ್ನಟ್ಟಿದಾಗ ತಪ್ಪಿಸಲು ಈ ರಸ್ತೆಯಾಗಿ ಸಂಚರಿಸಿದ ಸಂದರ್ಭದಲ್ಲಿ ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಸಂಶಯವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದಾರೆ