ಮಂಗಳೂರು, ಡಿ 08 (DaijiworldNews/AA): 'ಮಾಸ್ಟರ್ ಶೆಫ್ ಇಂಡಿಯಾ 2023'ರ ಸ್ಪರ್ಧೆಯಲ್ಲಿ ಮಂಗಳೂರಿನ ಮೊಹಮ್ಮದ್ ಆಶಿಕ್ ಅವರು ವಿಜೇತರಾಗಿದ್ದು, ಈ ಮೂಲಕ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ಮಾಸ್ಟರ್ ಶೆಫ್ ಗೆ ತೆರಳುವ ಸಂದರ್ಭದಲ್ಲಿ ಮುಹಮ್ಮದ್ ಆಶಿಕ್ ಅವರು ದಾಯ್ಜಿವರ್ಲ್ಡ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೋಸ್ಟಲ್ ಶೆಫ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಸೆಮಿಫೈನಲ್ ಹಂತದಲ್ಲಿದ್ದರು.
ಇಂದು ನಡೆದ ಸ್ಪರ್ಧೆಯ ಕೊನೆಯ ಸಂಚಿಕೆಯಲ್ಲಿ ಫೈನಲ್ ತಲುಪಿದ್ದ ರುಖ್ಸಾರ್ ಸಯೀದ್, ಸೂರಜ್ ಥಾಪಾ, ನಂಬಿ ಜೆಸ್ಸಿಕಾ ಮರಕ್ ಅವರನ್ನು ಹಿಂದಿಕ್ಕಿ 'ಮಾಸ್ಟರ್ ಶೆಫ್ ಇಂಡಿಯಾ' ಪ್ರಶಸ್ತಿ ಗೆಲ್ಲುವಲ್ಲಿ ಮೊಹಮ್ಮದ್ ಆಶಿಕ್ ಯಶಸ್ವಿಯಾಗಿದ್ದಾರೆ. ಇನ್ನು ಸ್ಪರ್ಧೆಯ ಮೊದಲ ರನ್ನರ್ ಅಪ್ ಸ್ಥಾನವನ್ನು ನಂಬಿ ಜೆಸ್ಸಿಕಾ ಮರಕ್ ಅವರು ಹಾಗೂ ಎರಡನೇ ರನ್ನರ್ ಅಪ್ ಸ್ಥಾನವನ್ನು ರುಖ್ಸಾರ್ ಸಯೀದ್ ಅವರು ಪಡೆದುಕೊಂಡಿದ್ದಾರೆ.
ಕೇವಲ 24 ವರ್ಷದ ಮೊಹಮ್ಮದ್ ಆಶಿಕ್ ಅವರಿಗೆ ಕಳೆದ ಸೀಸನ್ ಪಾಲ್ಗೊಂಡರೂ ಸಹ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ಮುಹಮ್ಮದ್ ಆಶಿಕ್ ಧೃತಿಗೆಡದೆ, ಈ ಬಾರಿ ಮತ್ತೆ ಸ್ಪರ್ಧೆಯಲ್ಲಿ ಪಾಲ್ಗೊಂಡು, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ದೇಶಾದ್ಯಂತ ಭಾಗವಹಿಸಿದ ಸುಮಾರು 30 ಸಾವಿರ ಸ್ಪರ್ಧಾಳುಗಳ ಪೈಕಿ ಮುಹಮ್ಮದ್ ಆಶಿಕ್ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಟಾಪ್ 12ರಲ್ಲಿ ಸ್ಥಾನ ಗಳಿಸಿದ್ದರು.