ಬೆಳ್ತಂಗಡಿ, ಡಿ 08 (DaijiworldNews/AA): ಹಿರಿಯ ನಟಿ ಲೀಲಾವತಿ ಅವರು ಇಂದು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ.
ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾದ ಲೀಲಾವತಿ ಅವರು ಹುಟ್ಟಿದ್ದು 1937 ರಲ್ಲಿ. ಚಿಕ್ಕವಯಸ್ಸಿನಿಂದಲೇ ನಾಟಕ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿದ್ದ ಅವರು ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿ ಹಲವಾರು ನಾಟಕಗಳಲ್ಲಿ ಬಣ್ಣಹಚ್ಚಿದ್ದರು. ಬಳಿಕ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯನ್ನು ಸೇರಿದ ಅವರು, ಅಲ್ಲಿಯೂ ಸಹ ಹಲವಾರು ನಾಟಕದಲ್ಲಿ ನಟಿಸಿದರು.
ಮೈಸೂರಿನಲ್ಲಿ ತನ್ನ ವೃತ್ತಿಜೀವನ ಆರಂಭಿಸಿದ ಅವರು ಸಿನಿರಂಗದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಮುನ್ನ ಮನೆ ಕೆಲಸಕ್ಕೂ ಹೋಗುತ್ತಿದ್ದರು. ಈ ಮೂಲಕ ಜೀವನ ಸಾಗಿಸುತ್ತಿದ್ದರು.
ಇನ್ನು ಲೀಲಾವತಿ ಅವರ ಮಗ ವಿನೋದ್ ರಾಜ್ ಕೂಡ ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದಾರೆ. ಲೀಲಾವತಿ ಕೇವಲ ನಟಿಯಾಗಿ ಅಷ್ಟೇ ಅಲ್ಲದೇ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದರು. ಅವರು ‘ಅಷ್ಟಲಕ್ಷ್ಮೀ ಕಂಬೈನ್ಸ್’, ‘ಲೀಲಾವತಿ ಕಂಬೈನ್ಸ್’ ಸಂಸ್ಥೆಗಳ ಮೂಲಕ 5 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ಲೀಲಾವತಿ ಹಾಗೂ ಅವರ ಮಗ ತೋಟಗಾರಿಕೆ ಮತ್ತು ಕೃಷಿ ಚಟುವಟಿಗೆಳಲ್ಲಿ ಸಕ್ರಿಯರಾಗಿದ್ದರು. ಸಮಾಜ ಸೇವೆಯಲ್ಲಿ ತಾಯಿ-ಮಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅವರು ಇತ್ತೀಚೆಗಷ್ಟೇ ಲೀಲಾವತಿ ಅವರ ಕನಸಿನ ಕನಸಿನ ಪಶು ಆಸ್ಪತ್ರೆಯನ್ನು ಉದ್ಘಾಟನೆ ಮಾಡಲಾಗಿತ್ತು.