ಉಡುಪಿ, ಡಿ 08 (DaijiworldNews/MS): ಮರಳು ಸಹಿತ ಉಡುಪಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಮುಂದಿನ 10 ದಿನಗಳೊಳಗೆ ಪರಿಹರಿಸದೇ ಇದ್ದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.
ರಾಜ್ಯ ಸರಕಾರ ಅಸ್ತಿತ್ವಕ್ಕೆ ಬಂದು ಆರು ತಿಂಗಳು ಕಳೆದರೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಜನತೆಗೆ ಮರಳು ಸಿಗುತ್ತಿಲ್ಲ, ಭೂ ಪರಿವರ್ತನೆ ಸಹಿತ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಿಂಗಲ್ ಲೇಔಟ್ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ, ಹೊಸ ರೇಷನ್ ಕಾರ್ಡ್ ವಿತರಣೆ ಸ್ಥಗಿತಗೊಂಡಿದ್ದು ಪರಿಷ್ಕರಣೆಗೂ ಅವಕಾಶ ನೀಡುತ್ತಿಲ್ಲ. ಯಾವುದೇ ಇಲಾಖೆಗಳಲ್ಲಿ ಸಾರ್ವಜನಿಕರಿಗೆ ಸ್ಪಂದನೆ ದೊರಕುತ್ತಿಲ್ಲ. ಹೊಸ ಸರಕಾರದ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನತೆ ಭ್ರಮನಿರಸಗೊಂಡಿದ್ದಾರೆ.
ಕಾಂಗ್ರೆಸ್ ಶಾಸಕರೇ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ ಎಂದು ಸದನದಲ್ಲಿ ಹಾಗೂ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿ ಗುಲ್ಲೆಬ್ಬಿಸಿದ್ದಾರೆ. ಆದುದರಿಂದ ರಾಜ್ಯ ಸರಕಾರ ಅಭಿವೃದ್ಧಿ ಶೂನ್ಯ ಸರಕಾರವಾಗಿದೆ.
ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನತೆಯ ಜ್ವಲಂತ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಬೇಕು, ಜಿಲ್ಲೆಯ ಜನತೆಗೆ ಸಮರ್ಪಕ ಮರಳು ನೀಡಬೇಕು, ರೇಷನ್ ಕಾರ್ಡ್ ಪರಿಷ್ಕರಣೆ ಸಹಿತ ಇಲಾಖೆಗಳ ಕೆಲಸ ಕಾರ್ಯಗಳಿಗೆ ವೇಗ ನೀಡಬೇಕು. ಈ ಎಲ್ಲ ಸಮಸ್ಯೆಗಳನ್ನು ಮುಂದಿನ 10 ದಿನಗಳೊಳಗೆ ಪರಿಹರಿಸದೇ ಇದ್ದಲ್ಲಿ ಜಿಲ್ಲೆಯ ಜನತೆಯ ಜೊತೆಗೆ ಜಿಲ್ಲಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.