ಧರ್ಮಸ್ಥಳ, ನ14 : ಶ್ರೀ ಮಂಜುನಾಥೇಶ್ವರ ಸನ್ನಿಧಿದಲ್ಲಿ ಲಕ್ಷದೀಪೋತ್ಸದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಹೊಸಕಟ್ಟೆ ಉತ್ಸವದೊಂದಿಗೆ ಧಾರ್ಮಿಕ ಪೂಜಾಕಾರ್ಯಗಳಿಗೆ ಚಾಲನೆ ದೊರಕಿತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಸಮಕ್ಷಮದಲ್ಲಿ ಹೊಸಕಟ್ಟೆ ಉತ್ಸವದ ಪೂಜಾವಿಧಿವಿಧಾನಗಳು ನೆರವೇರಿದವು.
ಸೋಮವಾರ ರಾತ್ರಿ ನಡೆದ ಹೊಸಕಟ್ಟೆ ಉತ್ಸವದ ಪ್ರಯುಕ್ತ ಮಂಜುನಾಥ ಸ್ವಾಮಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ವಿಜೃಂಭಣೆಯ ಮೆರವಣಿಗೆಯೊಂದಿಗೆ ವಸಂತಮಹಲ್ನ ಹೊಸಕಟ್ಟೆಯ ಬಳಿ ಕರೆದೊಯ್ಯಲಾಯಿತು. ವಿಶೇಷ ಪೂಜೆಗಳು, ನೈವೇದ್ಯ ಸೇರಿದಂತೆ ಅಷ್ಟ ವಿಧವಾದ ಸೇವೆಗಳನ್ನು ನೆರವೇರಿಸಲಾಯಿತು.
ದೇವರು ಹೊಸಕಟ್ಟೆಯಲ್ಲಿ ಕೂತ ಬಳಿಕ ಅಷ್ಟವಿಧವಾದ ಪೂಜೆಗಳು ನಡೆಯುತ್ತವೆ. ಈ ಬಾರಿಯ ಹೊಸಕಟ್ಟೆ ಉತ್ಸವದಂದು ಭಕ್ತರೊಬ್ಬರ ಹರಕೆಯಂತೆ ಬೆಳ್ಳಿ ರಥದ ಮೂಲಕ ಪಲ್ಲಕ್ಕಿಯ ಮೆರವಣಿಗೆ ವಿಶೇಷವಾಗಿತ್ತು. ಹೊಸಕಟ್ಟೆಯಲ್ಲಿ ಪೂಜೆಗಳ ಬಳಿಕ ಮೆರವಣಿಗೆ ದೇವಳದತ್ತ ಸಾಗಿತು.
ಧರ್ಮಸ್ಥಳವು ವಿದ್ಯುತ್ ದೀಪಗಳ ಬೆಳಕಿನಲ್ಲಿ ಕಂಗೊಳಿಸಿತು. ಪೂಜೆಯ ಸಂದರ್ಭದಲ್ಲಿ ೪೫ ಬಗೆಯ ವಿದ್ಯುತ್ ದೀಪಾಲಂಕಾರ ಹಲವರನ್ನು ಆಕರ್ಷಿಸಿತು. ದೇವಸ್ಥಾನದ ಮುಂಭಾಗದಲ್ಲಿ ಐದು ಹಣತೆಯ ದೀಪಗಳು ಬೆಳಗುತ್ತಿದ್ದವು. ಇಲ್ಲಿ ಹಣತೆಯ ದೀಪ ಹಚ್ಚಿದರೆ ಸಂಕಷ್ಟ ನಿವಾರಣೆಯಾಗುತ್ತದೆ ಎಂಬ ಪ್ರತೀತಿ ಇದೆ. ಹಲವು ಭಕ್ತರು ಹಣತೆಯ ದೀಪ ಬೆಳಗಿಸುತ್ತಿದ್ದುದು ಕಂಡುಬಂತು.