ಮಂಗಳೂರು, ಡಿ 07 (DaijiworldNews/MS): ಜಿಲ್ಲೆಯಲ್ಲಿ ಪ್ರಸವ ಹಾಗೂ ನಂತರದಲ್ಲಿ ಆರೋಗ್ಯ ಏರುಪೇರಿನಿಂದ ತಾಯಿ ಮತ್ತು ಮಗು ಸಾವಿಗೀಡಾಗುವ ಪ್ರಮಾಣವನ್ನು ತಗ್ಗಿಸಲು ಆರೋಗ್ಯ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಬಳಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂಪಿ ಸೂಚಿಸಿದ್ದಾರೆ.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ತಾಯಿ ಮತ್ತು ಶಿಶು ಮರಣ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ವ್ಯವಸ್ಥೆಗಳು ಮತ್ತು ಸೌಲಭ್ಯಗಳು ಸಾಕಷ್ಟಿವೆ. ಉತ್ತಮ ವೈದ್ಯಕೀಯ ಮಾನವ ಸಂಪನ್ಮೂಲವಿದೆ. ಆರೋಗ್ಯ ವ್ಯವಸ್ಥೆಯು ಜನರಿಗೆ ಸುಲಭವಾಗಿ ತಲುಪುತ್ತಿದೆ, ಆದರೂ ಜಿಲ್ಲೆಯಲ್ಲಿನ ಪ್ರಸವ ನಂತರ ತಾಯಿ ಮತ್ತು ಶಿಶು ಮರಣ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣವು 1000 ಕ್ಕೆ 39 ಇದ್ದು, ರಾಜ್ಯದ ಉಳಿದ ಜಿಲ್ಲೆಗಳಿಗಿಂತ ಉತ್ತಮವಾಗಿದೆ. ಕೇರಳ ರಾಜ್ಯದಲ್ಲಿ ಇದು 19 ಇದೆ. ಪ್ರಸಕ್ತ ವರ್ಷ ಎಪ್ರಿಲ್ನಿಂದ ನವೆಂಬರ್ ವರೆಗೆ ಜಿಲ್ಲೆಯಲ್ಲಿ ಪ್ರಸವ ನಂತರ ತಾಯಿ ಸಾವನ್ನಪ್ಪಿರುವ ಏಳು ಪ್ರಕರಣಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಮತ್ತು ಆಸ್ಪತ್ರೆಗಳು, ವೈದ್ಯರು ಸಮನ್ವಯತೆಯಿಂದ ತಾಯಿ ಶಿಶು ಮರಣ ಪ್ರಮಾಣ ತಗ್ಗಿಸಬೇಕು ಎಂದು ತಿಳಿಸಿದರು.
ಅವಧಿಪೂರ್ವ ಹೆರಿಗೆ, ರಕ್ತದೊತ್ತಡ, ಆರೋಗ್ಯ ವಿತರಣಾ ವ್ಯವಸ್ಥೆ ಮತ್ತು ಸಾಮಾಜಿಕ, ಆರ್ಥಿಕ ಇವು ಎಲ್ಲವು ತಾಯಿ ಮರಣಕ್ಕೆ ಮೂಲ ಕಾರಣಗಳಾಗಿವೆ. ಹೆಚ್ಚಾಗಿ ರಕ್ತಸ್ರಾವ, ಸೋಂಕು ತಗುಲುವಿಕೆ ಮತ್ತು ಅಧಿಕ ರಕ್ತದೊತ್ತಡದ ಅಸ್ವಸ್ಥತೆ, ಛಿದ್ರಗೊಂಡ ಗರ್ಭಾಶಯ, ಹೆಪಟೈಟಿಸ್ ಮತ್ತು ರಕ್ತಹೀನತೆಯಿಂದ ತಾಯಿ ಸಾವು ಹೆಚ್ಚಾಗುತ್ತಿದೆ. ತಾಯಂದಿರ ಸಾವುಗಳನ್ನು ಸರಿಯಾದ ನಿರ್ವಹಣೆಯಿಂದ ತಡೆಯಬಹುದು. ಗರ್ಭಧಾರಣೆಯ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮಹಿಳೆಯ ಮತ್ತು ಕುಟುಂಬದ ಮಾಹಿತಿ ಕಲೆ ಹಾಕಬೇಕು. ಅವರ ಸಂಪೂರ್ಣ ಮಾಹಿತಿ ತಿಳಿದುಕೊಂಡಿರಬೇಕು. ತಾಯಿ ಕಾರ್ಡ್ ಮಾಡುವ ಸಮಯದಲ್ಲಿ ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು. ಎಂದು ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕ ಆಹಾರ ಮತ್ತು ಆರೈಕೆ ಮತ್ತು ಆರೋಗ್ಯದಲ್ಲಿ ಆಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬೇಕು. ಹೆರಿಗೆಯ ಸಮಯದಲ್ಲಿ ಅಥವಾ ಪೂರ್ವ ಯಾವುದೇ ಸಮಸ್ಯೆ ಆದರೆ ಮೂಡನಂಬಿಕೆಗೆ ಒಳಗಾಗದೆ ವೈದ್ಯರನ್ನು ಸಂಪರ್ಕಿಸಲು ಮಾಹಿತಿ ನೀಡಬೇಕು ಎಂದು ಪ್ರಚಾರ ಮಾಡಬೇಕು ಎಂದರು.
ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತಾಯಿ ಮರಣ ಮತ್ತು ಶಿಶುಮರಣದ ಬಗ್ಗೆ ತರಬೇತಿ ನೀಡಬೇಕು. ಗರ್ಭಾವಸ್ಥೆಯಲ್ಲಿ ವೈದ್ಯರ ಸಲಹೆ ಪಡೆಯಲು ಆಶಾ ಕಾರ್ಯಕರ್ತರು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪ್ರಸವ ಪೂರ್ವದಿಂದ ಹಿಡಿದು ಹೆರಿಗೆಯ ನಂತರದ ಆರೈಕೆ ಮತ್ತು ಚಿಕಿತ್ಸೆಗಳ ಬಗ್ಗೆ ಸ್ಥಳೀಯ ಭಾಷೆಗಳಲ್ಲಿ ವಿಡಿಯೋಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಬೇಕು. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಗರ್ಭಿಣಿಯರಿಗೆ ಮಾಹಿತಿ ದೊರಕಿಸುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪ್ರಸವ ನಂತರ ತಾಯಿ ಸಾವನ್ನಪ್ಪಿದ ಕುಟುಂಬ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಅವರ ಅಹವಾಲುಗಳನ್ನು ಜಿಲ್ಲಾಧಿಕಾರಿಗಳು ಆಲಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ತಿಮ್ಮಯ್ಯ, ವೆನ್ಲಾಕ್ ಅಧೀಕ್ಷಕಿ ಡಾ. ಜೆಸಿಂತಾ, ಲೇಡಿಗೋಷನ್ ಅಧೀಕ್ಷಕ ಡಾ. ದುರ್ಗಾಪ್ರಸಾದ್, ಆರೋಗ್ಯ ಇಲಾಖೆ ಅಧಿಕಾರಿಗಳಾದ ಡಾ. ದೀಪಾ ಪ್ರಭು, ಡಾ.ರಾಜೇಶ್, ಡಾ. ಬದ್ರುದ್ದೀನ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ ಉಸ್ಮಾನ್, ತಾಲೂಕು ಆರೋಗ್ಯ ಅಧಿಕಾರಿಗಳು, ವಿವಿಧ ಆಸ್ಪತ್ರೆಗಳ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರು ಉಪಸ್ಥಿತರಿದ್ದರು.