ಮಂಗಳೂರು, ಎ18(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆದಿದೆ. ಬೆಳಗ್ಗೆ 7 ಗಂಟೆಯಿಂದಲೇ ಹೆಚ್ಚಿನ ಮತಗಟ್ಟೆಗಳಲ್ಲಿ ಉದ್ದದ ಸರತಿ ಸಾಲು ಕಂಡು ಬಂದಿದ್ದು. ಬೆಳಗ್ಗೆ 11 ಗಂಟೆ ವೇಳೆಗೆ ಶೇ.32.3ರಷ್ಟು ಮತದಾನ ನಡೆದಿದೆ.
ಈ ವೇಳೆ ಮಂಗಳೂರು ಬಲ್ಮಠ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಗೆ ಆಗಮಿಸಿದ ವೃದ್ಧರೊಬ್ಬರಿಗೆ ಮೈತ್ರಿ ಮಿಥುನ್ ರೈ ಸಹಾಯ ಮಾಡಿದ ಮಾನವೀಯತೆಯ ಘಟನೆ ನಡೆದಿದೆ. ನಡೆಯಲು ಅಶಕ್ತರಾಗಿದ್ದ 83 ವರ್ಷದ ರಮೇಶ್ ರಾವ್ ಎಂಬವರಿಗೆ ಮಿಥುನ್ ರೈಗೆ ಸಹಾಯ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಂಗಳೂರಿನ ಬಲ್ಮಠ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ. ಜನಸಾಮಾನ್ಯನಂತೆ ಸರತಿ ಸಾಲಿನಲ್ಲಿ ನಿಂತು ಮಿಥುನ್ ರೈ ಮತದಾನ ಮಾಡಿದ್ದಾರೆ.
ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಹಳ ಉತ್ಸಾಹದಿಂದ ಮತದಾರ ಪ್ರಭುಗಳು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.