ಬಹರೈನ್, ಡಿ 07 (DaijiworldNews/MS): ದಾಯ್ಜಿವರ್ಲ್ಡ್ ವಾಹಿನಿಯ ಪ್ರೈವೇಟ್ ಚಾಲೆಂಜ್ ಎಂಬ ತುಳು ಹಾಸ್ಯ ಕಾರ್ಯಕ್ರಮದ ಮೂಲಕ ಜಾಗತಿಕವಾಗಿ ಸದ್ದು ಮಾಡಿದ ಅರವಿಂದ್ ಬೋಳಾರ್- ವಾಲ್ಟರ್ ನಂದಳಿಕೆ ಜೋಡಿ ಈ ವರ್ಷದ ಬಹರೈನ್ ಕುಡ್ಲೋತ್ಸವದ ವಿಶೇಷ ಆಕರ್ಷಣೆಯಾಗಲಿದ್ದಾರೆ.
ಡಿಸೆಂಬರ್ 8 ರಂದು ಬಹರೈನ್ ಸಲ್ಮಾಬಾದಿನ ಗಲ್ಫ್ ಏರ್ ಕ್ಲಬ್ ನ ತೆರೆದ ಸಭಾಂಗಣದಲ್ಲಿ ಈ ಭಾರಿಯ ಕುಡ್ಲೋತ್ಸವವು ನಡೆಯಲಿದ್ದು ಅಯೋಜಕರು ಕಾರ್ಯಕ್ರಮದ ಕೊನೆ ಹಂತದ ತಯಾರಿಯಲ್ಲಿದ್ದಾರೆ. ಕುಡ್ಲೋತ್ಸವದ ಪ್ರಮುಖ ಭಾಗವಾದ ಮನೋರಂಜನಾ ಕಾರ್ಯಕ್ರಮವು ಸಂಜೆ 5:30ಕ್ಕೆ ಆರಂಭವಾಗಲಿದ್ದು ಬೋಳಾರ್ ಹಾಗೂ ನಂದಳಿಕೆ ತಮ್ಮ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದ ವಿಶೇಷ ಕಿರು ಹಾಸ್ಯಪ್ರಸಂಗಗಳನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸಲಿದ್ದಾರೆ.
ಟಿವಿ ಕಾರ್ಯಕ್ರಮ ಮೂಲಕ ಆರಂಭಗೊಂಡ ಪ್ರೈವೇಟ್ ಚಾಲೆಂಜ್ ಹಾಸ್ಯ ಸರಣಿ ಇದೀಗ ವಿದೇಶಗಳಲ್ಲಿನ ಮನೋರಂಜನಾ ವೇದಿಕೆಗಳಲ್ಲಿ ಅತ್ಯಂತ ಬೇಡಿಕೆಯಿದ್ದು ಜೋಡಿಯು ಈಗಾಗಲೇ ಆಸ್ಟ್ರೇಲಿಯಾ, ಕುವೈತ್, ಕತಾರ್, ಯುಎಇ, ಇಸ್ರಾಯೆಲ್, ಥಾಯ್ಲೆಂಡ್, ಬಹರೈನ್ ಮೊದಲಾದ ದೇಶಗಳಲ್ಲಿ ತಮ್ಮ ಹಾಸ್ಯದ ಮೂಲಕ ಅನಿವಾಸಿ ತುಳುವರ ಮನಗೆದ್ದಿದೆ. ಬಹರೈನ್ ಕುಡ್ಲೋತ್ಸವದಲ್ಲಿ ಇದೀಗ ದ್ವಿತೀಯ ಭಾರಿಗೆ ಬೋಳಾರ್-ನಂದಳಿಕೆ ಜೋಡಿ ಹಾಸ್ಯ ತುಣುಕುಗಳನ್ನು ಪ್ರಸ್ತುತಪಡಿಸಲಿದ್ದು ಬಹರೈನ್ ನಲ್ಲಿ ವಾಸಿಸುವ ತುಳುವರಿಗೆ ವಿಶೇಷ ಹಾಸ್ಯ ಸವಿಯುವ ಭಾಗ್ಯ ಒದಗಿ ಬಂದಿದೆ.