ಮಂಗಳೂರು, ಡಿ 07 (DaijiworldNews/AK): ಮೈನ್ಸ್ ಲಾರಿಯೊಂದು ಚಾಲಕನ ಯಡವಟ್ಟಿನಿಂದ ನಿಯಂತ್ರಣ ತಪ್ಪಿ ಹೆದ್ದಾರಿ ಬಿಟ್ಟು ಸರ್ವಿಸ್ ರಸ್ತೆಗೆ ನುಗ್ಗಿದ್ದು ಅಟೋ ರಿಕ್ಷಾ ಹಾಗೂ ಬೈಕ್ ಜಖಂ ಆಗಿದ್ದು ರಸ್ತೆ ಬದಿ ಕುಳಿತ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಂಗಳುರು ಹೊರವಲಯ ಮುಲ್ಕಿ ಬಳಿ ಸಂಭವಿಸಿದೆ.
ಉಡುಪಿಯತ್ತ ತೆರಳುತ್ತಿದ್ದ ಲಾರಿ ಏಕಾಏಕಿ ಹೆದ್ದಾರಿ ಬಿಟ್ಟು ನೇರವಾಗಿ ಸರ್ವಿಸ್ ರಸ್ತೆಗೆ ನುಗ್ಗಿದೆ. ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿದ್ದ ಒಂದು ಅಟೋ ರಿಕ್ಷಾ ಹಾಗೂ ಬೈಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ಸಂಗಪ್ಪ ಗಂಬೀರ ಗಾಯಗೊಂಡಿದ್ದಾರೆ. ಲಾಡ್ಜ್ ನಲ್ಲಿ ವಾಚ್ ಮ್ಯಾನ್ ಕೆಲಸ ಮಾಡುತ್ತಿದ್ದ ಸಂಗಪ್ಪ ತನ್ನ ಮಗಳನ್ನು ಬಸ್ ನಿಲ್ದಾಣಕ್ಕೆ ಬಿಡಲು ಬರುತ್ತಿದ್ದರು. ಮಗಳು ಸವಿತಾ ಸಣ್ಣ ಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ.
ಲಾರಿ ತಮ್ಮತ್ತ ನುಗ್ಗಿ ಬರುತ್ತಿದ್ದಾಗಲೇ ರಸ್ತೆ ಬದಿಯಲ್ಲಿ ಕುಳಿತಿದ್ದ ಕೂಲಿ ಕಾರ್ಮಿಕರು ಎದ್ದು ಓಡುವ ಮೂಲಕ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಬಚಾವ್ ಆಗಿದ್ದಾರೆ. ಈ ಘಟನೆಯಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.
ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಪಟ್ಟಿಯಾಗಿ ಬಿದ್ದಿದೆ. ಅದರಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯವಾಗಿದೆ. ಅಷ್ಟೇಲ್ಲ ಅವಘಡ ಸಂಭವಿಸಿದರು ಲಾರಿ ಚಾಲಕ ನಿಲ್ಲಿಸದೆ ಮುಂದೆಕ್ಕೆ ಸಾಗಿದ್ದಾನೆ. ಬಳಿಕ ಮುಲ್ಕಿ ಪೊಲೀಸರು ಬೆನ್ನತ್ತಿ ಲಾರಿ ವಶಕ್ಕೆ ಪಡೆದು ಚಾಲಕನ್ನು ಬಂಧಿಸಿದ್ದಾರೆ.