ಮಂಗಳೂರು, ಡಿ 06 (DaijiworldNews/MR): ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು, ಭಾರತಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಮಾಜಿ ಸಚಿವ ಸಿ.ಟಿ.ರವಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಅಪಾಯಕಾರಿ. ಈ ಮಾನಸಿಕತೆಯಿಂದಲೇ ದೇಶ ವಿಭಜನೆಗೆ ಕಾರಣವಾಗಿದ್ದು, ಈ ಹೇಳಿಕೆ ಕೋಮುವಾದ ನೀತಿಯ ನಿದರ್ಶನ. ಓಲೈಕೆ ರಾಜಕಾರಣ ವೋಟ್ ಬ್ಯಾಂಕ್ಗಾಗಿ ಇಂತಹ ಅಪಾಯಕಾರಿ ಹೇಳಿಕೆ. ದೇಶದ ಸಂಪತ್ತು ಭಾರತೀಯರಿಗೆ ಸೇರಿದ್ದು. ಭಾರತೀಯತೆಯನ್ನ ಒಪ್ಪಿದವರಿಗೆ ಸೇರಿದ್ದು.
ಭಾರತದಲ್ಲೇ ಇದ್ದು ಭಾರತ ದೇಶಕ್ಕೆ ದ್ರೋಹ ಬಗೆಯುವವರಿಗೆ ಅಲ್ಲ. ದೇಶದ ಸಂಪತ್ತಿನ ಮೊದಲ ಹಂಚಿಕೆ ಬಡವರಿಗೆ ಆಗಬೇಕು, ಅದು ನಮ್ಮ ನೀತಿ. ಈ ಓಲೈಕೆಯ ರಾಜನೀತಿಯ ಪರಿಣಾಮ ಕೋಟ್ಯಂತರ ಜನ ನಿರ್ವಸತಿಯಾಗೋದಕ್ಕೆ ಕಾರಣವಾಗಿದ್ದು. ಕಾಂಗ್ರೆಸ್ ಇಸ್ ರಿಯಲ್ ಕಮ್ಯುನಲ್ ಪಾರ್ಟಿ ಎಂದು ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿ ಭಾಗವಹಿಸಿದ್ದ ಹುಬ್ಬಳ್ಳಿಯ ಸಭೆಯಲ್ಲಿ ಐಸಿಸ್ ಏಜೆಂಟ್ ಇದ್ದರು ಎಂಬ ಯತ್ನಾಳ್ ಆರೋಪ ಬಗ್ಗೆ ಮಾತನಾಡಿ, ಯತ್ನಾಳ್ ಅವರು ಸುಮ್ಮನೆ ಆರೋಪ ಮಾಡಿದ್ದಾರೆ ಅಂತಾ ಅನ್ನಿಸೋದಿಲ್ಲ. ಈ ವಿಷಯದ ಬಗ್ಗೆ ಸಿಬಿಐ ಹಾಗೂ ಎನ್ ಐಎ ತನಿಖೆ ನಡೆಸುವ ಅವಶ್ಯಕತೆಯಿದೆ ಎಂದರು. ಕಾರ್ಯಕ್ರಮದಲ್ಲಿ ಯರ್ಯಾರು ಇದ್ದರು, ಅವರ ಹಿನ್ನೆಲೆ ಏನು ಅನ್ನೋದರ ಬಗ್ಗೆ ಗಂಭೀರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸೋಮಣ್ಣ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿ, ಸಿದ್ದಗಂಗಾ ಮಠದಲ್ಲಿ ಇವತ್ತು ಗುರುಭವನದ ಉದ್ಘಾಟನೆ. ಗುರುಭವನದ ಉದ್ಘಾಟನೆಗೆ ಬಿಜೆಪಿಯವರನ್ನು ಕರೆದಿದ್ದಾರೆ. ಹಾಗೆಯೇ ಆ ಜಿಲ್ಲೆಯ ಕಾಂಗ್ರೆಸ್ ನಾಯಕರನ್ನೂ ಕರೆದಿದ್ದಾರೆ.
ಕೇವಲ ಕಾಂಗ್ರೆಸ್ ನವರನ್ನೇ ಕರೆದಿದ್ದಾರೆ ಅನ್ನೋದು ತಪ್ಪು ಮಾಹಿತಿ. ನನಗೂ ಕಾರ್ಯಕ್ರಮದ ಆಮಂತ್ರಣ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್, ರಾಜಣ್ಣ ಅದೇ ಜಿಲ್ಲೆಯವರು ಎಂದು ಕರೆದಿದ್ದಾರೆ. ಸೋಮಣ್ಣ ಬಿಜೆಪಿ ಬಿಡ್ತಾರೆ ಅನ್ನೋದು ತಪ್ಪು ಮಾಹಿತಿ. ಪಾರ್ಟಿ ಹೇಳಿದ್ದಕ್ಕೆ ಅವರೂ ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ. ಅವರು ಬಿಜೆಪಿ ಬಿಡ್ತಾರೆ ಅನ್ನೋದು ಉಹಾಪೋಹ ಎಂದರು.