Karavali
ಉಡುಪಿ: ಪುತ್ತಿಗೆ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ ಸಂಪನ್ನ
- Wed, Dec 06 2023 05:14:18 PM
-
ಉಡುಪಿ, ಡಿ 6 (DaijiworldNews/MS): ಉಡುಪಿಯ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಶ್ರೀಕೃಷ್ಣ ಪೂಜೆಯ ದ್ವೈವಾರ್ಷಿಕ ಪರ್ಯಾಯ ನಿಟ್ಟಿಲ್ಲಿ ನಾಲ್ಕನೇ ಬಾರಿ 2024 ಜನವರಿ 18 ರಂದು ಸರ್ವಜ್ಞ ಪೀಠವನ್ನೇರಲಿದ್ದು ಪರ್ಯಾಯ ಪೂರ್ವಭಾವಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ ಮುಹೂರ್ತವು ಬುಧವಾರ ನೆರವೇರಿತು.
ಈಗಾಗಲೇ ಬಾಳೆ, ಅಕ್ಕಿ, ಕಟ್ಟಿಗೆ ಮುಹೂರ್ತ ಪೂರೈಸಿದ್ದು ತೀರ್ಥ ಕ್ಷೇತ್ರ ಸಂಚಾರ ಬಳಿಕ ಜ.8 ರಂದು ತಮ್ಮ ಶಿಷ್ಯ ಶ್ರೀಸುಶ್ರೀಂದ್ರತೀರ್ಥರ ಒಡಗೂಡಿ ಶ್ರೀಸುಗುಣೇಂದ್ರತೀರ್ಥರು ಉಡುಪಿ ಪುರಪ್ರವೇಶ ಮಾಡಲಿದ್ದಾರೆ.
ಧಾನ್ಯ ಮುಹೂರ್ತ ಅಂಗವಾಗಿ ಪುತ್ತಿಗೆ ಮಠದ ವಿಠಲ ದೇವರಿಗೆ ಬೆಳಗ್ಗಿನ ಮಹಾಪೂಜೆ ಸಲ್ಲಿಸಿ, ದೇವತಾ ಪ್ರಾರ್ಥನೆ ನೆರವೇರಿತು. ಬಳಿಕ ಮೆರವಣಿಗೆಯಲ್ಲಿ ತೆರಳಿ ಚಂದ್ರೇಶ್ವರ, ಅನಂತೇಶ್ವರ, ಶ್ರೀಕೃಷ್ಣ ಮುಖ್ಯಪ್ರಾಣ, ಗರುಢ, ಮಧ್ವ, ಸರ್ವಜ್ಞ ಸಿಂಹಾಸನ, ಭೋಜನ ಶಾಲೆ ಪ್ರಾಣ ದೇವರು, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನ, ಗೋ ಶಾಲೆಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು. ಪುತ್ತಿಗೆ ಮಠಕ್ಕೆ ಮರಳಿ ಬಂದು ತಲೆ ಹೊರೆಯಲ್ಲಿ ಧಾನ್ಯ ಮುಡಿ, ಸ್ವರ್ಣ ಪಲ್ಲಕ್ಕಿಯಲ್ಲಿ ಕಿರು ಮುಡಿಯಿಟ್ಟು ರಥಬೀದಿಯಲ್ಲಿ ಮೆರವಣಿಗೆ ಬಳಿಕ ಶ್ರೀಕೃಷ್ಣಮಠದ ಬಡಗುಮಾಳಿಗೆಯ ಗದ್ದುಗೆಯಲ್ಲಿ ನಾಲ್ಕು ಮುಡಿಗಳ ಮೇಲೆ ಕಿರು ಮುಡಿಯಿಟ್ಟು ಪೂಜೆ ಸಲ್ಲಿಸಲಾಯಿತು. ವಿವಿಧ ಮಠ, ಉಪಮಠದ ಪ್ರತಿನಿಧಿಗಳು, ವಿದ್ವಾಂಸರಿಗೆ ಗೌರವ, ನವಗ್ರಹ ದಾನ ನೀಡಿದ ಬಳಿಕ ಮರಳಿ ಪುತ್ತಿಗೆ ಮಠಕ್ಕೆ ಬಂದು ವಿಠಲ ದೇವರಿಗೆ ಪೂಜೆ ಸಲ್ಲಿಸಲಾಯಿತು.
ಧಾನ್ಯ ಮುಹೂರ್ತದ ಧಾರ್ಮಿಕ ವಿಧಿ ವಿಧಾನವು ರಾಘವೇಂದ್ರ ಕೊಡಂಚ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭ ಮಧ್ವ ಸರೋವರದ ಬಳಿ ನಿರ್ಮಿಸಿದ ಕಟ್ಟಿಗೆ ರಥಕ್ಕೆ ಶಿಖರ ಇಡಲಾಯಿತು. ಧಾನ್ಯ ಮುಹೂರ್ತ ಸಂದರ್ಭ ಈ ಬಾರಿ ಪುತ್ತಿಗೆ ಹಿರಿಯಶ್ರೀಗಳು ವಿಶೇಷವಾಗಿ ಉಪಸ್ಥಿತರಿದ್ದರು.
2024 ಜನವರಿ 18 ರಿಂದ ಎರಡು ವರ್ಷಗಳ ಕಾಲ ನಡೆವ ಪುತ್ತಿಗೆ ಪರ್ಯಾಯಕ್ಕೆ ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಿಟ್ಟಿನಲ್ಲಿ ಧಾನ್ಯ ಸಂಗ್ರಹವೇ ಧಾನ್ಯ ಮುಹೂರ್ತದ ಹಿಂದಿರುವ ವೈಶಿಷ್ಟ್ಯವಾಗಿದೆ.
ಪುತ್ತಿಗೆ ಪರ್ಯಾಯ ಪೂರ್ವಭಾವಿ ಧಾನ್ಯ ಮುಹೂರ್ತ ಧಾರ್ಮಿಕ ಸಭೆಯಲ್ಲಿ ಪೂಜ್ಯ ಶ್ರೀಪಾದರು ದೇವರಿಗೆ ಪೂಜೆ, ದೀಪ, ಧೂಪ, ನೈವೇದ್ಯ ಸಮರ್ಪಣೆ ಹೊರತಾಗಿ ಪ್ರತಿಯೊಬ್ಬರೂ ಆಂತರಿಕವಾಗಿ ಭಗವದ್ ಚಿಂತನೆ ನಡೆಸಬೇಕು. ಈ ಬಾರಿಯದ್ದು ವಿಶ್ವ ಗೀತಾ ಪರ್ಯಾಯ ಎಂದು ಘೋಷಿಸಿದ ಶ್ರೀಗಳು, ದೇವರ ಪೂಜೆಯ ಸಂಕಲ್ಪ, ಪೂರ್ಣತೆ ನಡುವೆ ಒಂದೊಂದು ಫಲವಿದೆ. ಪ್ರತಿಯೊಬ್ಬರಿಗೂ ದೇವರ ಪೂಜೆ, ಅನುಗ್ರಹದ ಅಪೇಕ್ಷೆಯಿದ್ದರೂ ಜಗತ್ತಿಗೆ ಭಗವಂತನ ಅನುಗ್ರಹದ ಫಂಡ್ ಬಂದರೆ ಎಲ್ಲವೂ ಸುಲಲಿತ. ಮನುಷ್ಯ ಯತ್ನದ ಜತೆಗೆ ದೇವರ ಅನುಗ್ರಹ ಬೇಕು. ವೈಯಕ್ತಿಕಕ್ಕಿಂತ ಜಗದ ಶ್ರೇಯಸ್ಸಿನ ಪೂಜೆಯೇ ಪರ್ಯಾಯ. ಒಂದು ಕೋಟಿ ಜನರಿಂದ ಭಗವದ್ಗೀತೆ ಬರೆಸುವ ಸಂಕಲ್ಪ ನಮ್ಮದು, ಅದನ್ನು ಈಡೇರಿಸಲು ಶ್ರೀಕೃಷ್ಣನಿದ್ದಾನೆ.ಜಗತ್ತಿನ ಮೂಲೆ ಮೂಲೆಯಲ್ಲೂ ಗೀತಾ ಪ್ರಚಾರವಾಗಿದೆ. ಪರ್ಯಾಯದಲ್ಲಿ ದೇವರ ಸೇವೆ ಜತೆಗೆ ಭಕ್ತರ ಸೇವೆಯ ಅವಕಾಶ ಉಡುಪಿ ಜನರಿಗಿದೆ. ಅಮೆರಿಕದಲ್ಲಿ ತೆರೆದಿಟ್ಟ ಅಂಗಡಿಗಳನ್ನು ಬ್ಲ್ಯಾಕ್ ಫ್ರೈಡೇ ದಿನ ಸೂರೆ ಮಾಡುವಂತೆ( ಪರ್ಯಾಯ ಪೀಠದಿಂದ ಇಳಿವ ಮಠದ ಕೊನೆಯ ದಿನವೂ ಸೂರೆ ಸಂಪ್ರದಾಯವಿದೆ) ಹೀಗಾಗಿ ದೇವರ ಸೇವೆಯ ಅವಕಾಶವನ್ನು ಒಂದಿನಿತೂ ಬಿಡದೆ ಬಾಚಿಕೊಳ್ಳಬೇಕು” ಎಂದರು.
ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ಮಾತನಾಡಿ, ಹಿಂದೂಸಂಸ್ಕೃತಿ, ಮಾಧ್ವ ಪರಂಪರೆಯ ಪ್ರಚಾರದೊಂದಿಗೆ ವಿದೇಶದಲ್ಲಿ ೧೫ಕೃಷ್ಣ ಮಂದಿರ ಸ್ಥಾಪನೆ ಹಿನ್ನೆಲೆಯಲ್ಲಿ ಪುತ್ತಿಗೆ ಪರ್ಯಾಯ ವಿಶ್ವ ಪರ್ಯಾಯ. ಪರ್ಯಾಯವೇರುವ ಮೊದಲು ತೀಥ್೯ಸ್ನಾನ ಕೈಗೊಳ್ಳುವ ಕಾಪು ದಂಡತೀರ್ಥದಿಂದ ತೊಡಗಿ ವಿದ್ಯುದಲಂಕಾರ, ನಗರಾಲಂಕಾರಕ್ಕೆ ಸಿದ್ಧತೆ ನಡೆದಿದೆ. ನಗರದ 10 ಕಿ.ಮೀ. ವ್ಯಾಪ್ತಿಯ ಮನೆಮಂದಿ ಒಂದಿಬ್ಬರು ಅತಿಥಿಗಳಿಗೆ ಆತಿಥ್ಯದ ಹೊಣೆ ಹೊರಲು ಹೆಸರು ನೋಂದಾಯಿಸಬಹುದು. 2004 ರಲ್ಲಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಪರ್ಯಾಯ ಪೀಠವೇರುವ ಮೊದಲು ನಗರಸಭೆ ಪೌರ ಸನ್ಮಾನವನ್ನು ಆಡಳಿತಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿ ನೆರವೇರಿಸಿದ್ದರೆ ಈ ಬಾರಿಯೂ ಜ.೮ರಂದು ಶ್ರೀಗಳ ಪುರಪ್ರವೇಶ ಬಳಿಕದ ಪೌರ ಸನ್ಮಾನವೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯಲಿದೆ(ಚುನಾಯಿತ ಸದಸ್ಯರಿದ್ದರೂ ಅಧ್ಯಕ್ಷ ಉಪಾಧ್ಯಕ್ಷ ಚುನಾವಣಾ ಮೀಸಲು ಬಾರದ ಹಿನ್ನೆಲೆಯಲ್ಲಿ ಈ ಬಾರಿಯೂ ಜಿಲ್ಲಾಧಿಕಾರಿಯೇ ಆಡಳಿತಾಧಿಕಾರಿಯಾಗಿದ್ದಾರೆ) ಎಂದರು.
ಧಾನ್ಯ ಮುಡಿಗಳ ನಡುವೆ ಪೀಠಾಸೀನರಾಗಿದ್ದ ಪುತ್ತಿಗೆ ಶ್ರೀಗಳ ಮಾರ್ಗದರ್ಶನದಲ್ಲಿ ನವಗ್ರಹ ಚಿಂತನೆಯಿಂದ ಅತಿಥಿಗಳು ತಟ್ಟೆಗೆ ನವ ಧಾನ್ಯ ಸಮರ್ಪಿಸಿ ನವಗ್ರಹಚಿಂತನೆಯೊಂದಿಗೆ ಶ್ರೀಕೃಷ್ಣನಿಗೆ ಅರ್ಪಿಸಲಾಯಿತು. ಶ್ರೀಧರ ಉಪಾಧ್ಯ ನವಗ್ರಹಸ್ತೋತ್ರ ಪಠಿಸಿದರು.
ಪುತ್ತಿಗೆ ಪರ್ಯಾಯ 2024-26 ಆಹ್ವಾನ ಪತ್ರಿಕೆ ಪುತ್ತಿಗೆ ಶ್ರೀಗಳ ವಿಶೇಷ ಮುತುವರ್ಜಿಯಿಂದ ವಿಶಿಷ್ಟವಾಗಿ ರೂಪುಗೊಂಡಿದ್ದು ಬಿಡುಗಡೆ ಮಾಡಲಾಯಿತು.
ಕನ್ನರ್ಪಾಡಿ ಶ್ರೀಜಯದುರ್ಗಾಪರಮೇಶ್ವರಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರಭಟ್ ಅವರಿಗೆ ಹೊರೆ ಕಾಣಿಕೆ ಸಮರ್ಪಣೆ ಬ್ಯಾನರ್ ಹಸ್ತಾಂತರಿಸಲಾಯಿತು.
ಶ್ರೀಕೃಷ್ಣ ಬೋಧಿಸಿದ ಗೀತಾಸಾರವನ್ನು ಜಗತ್ತಿಗೆ ಉಣಿಸಿ ಧರ್ಮ, ಸಂಸ್ಕೃತಿ, ಸಂಸ್ಕಾರದ ಉಳಿವಿಗೆ ಆದ್ಯ ಗಮನ ಅಗತ್ಯ. ಪರ್ಯಾಯ ಸಂಸ್ಕಾರ ವಿದ್ಯಾರ್ಥ, ಯುವಜನರಿಗೆ ತಲುಪಬೇಕು. ಭಗವಂತನ ಸೇವೆಯಿಂದ ಸಂತೃಪ್ತಿ ಪಡೆಯಬೇಕು. ಹೊರೆಕಾಣಿಕೆ ವರ್ಷಕ್ಕಾಗುವಷ್ಟು ಸಂಗ್ರಹವಾಗಲಿ. ಪರ್ಯಾಯ ನದಿಯಲ್ಲಿ ನಾವೆಲ್ಲರೂ ಮಿಂದು ಪುನೀತರಾಗೋಣ.ದೇಶ, ಜಗತ್ತಿಗೆ ಸುಭಿಕ್ಷೆಯಾಗಲಿ. ವಿದೇಶಕ್ಕೆ ಹೋಗಿದ್ದಾಗ ಕೃಷ್ಣಮಂದಿರದಲ್ಲಿ ಇಂಗ್ಲೀಷ್ ಸತ್ಯನಾರಾಯಣ ಪೂಜೆ ಮೂಲಕ ಧಾರ್ಮಿಕತೆಯ ಪ್ರಸಾರ ಖುಷಿ ಕೊಟ್ಟಿತು ಎಂದು ರಾಜರ್ಷಿಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಡಾ.ಉಷಾ ಪಲ್ಲವಿ ಬಲ್ಲಾಳ್ ಪ್ರಾರ್ಥಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ ಸ್ವಾಗತಿಸಿದರು. ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಕೆ. ರಘುಪತಿ ಭಟ್ ಪ್ರಾಸ್ತಾವಿಕ ಮಾತನ್ನಾಡಿದರು.
ರಮೇಶ್ ಭಟ್ ಕೆ. ನಿರೂಪಿಸಿದರು.ಬೆಳಪು ದೇವಿಪ್ರಸಾದ್ ಶೆಟ್ಟಿ ವಂದಿಸಿದರು. ಡಾ.ಅರ್ಚನಾ ನಂದ ಕುಮಾರ್ ರಚಿತ
ಭುವನಾಭಿರಾಮ ಉಡುಪ, ಹರಿಕೃಷ್ಣ ಪುನರೂರು, ಜಯಕರ ಶೆಟ್ಟಿ, ರಂಜನ್ ಕಲ್ಕೂರ, ಬಿ. ಗೋಪಾಲಾಚಾರ್ಯ, ಮುರಳೀಧರ ಆಚಾರ್ಯ, ಪ್ರಸನ್ನ ಆಚಾರ್ಯ, ಮಂಜುನಾಥ ಉಪಾಧ್ಯ, ಶ್ರೀನಾಗೇಶ್ ಹೆಗ್ಡೆ, ವಿ.ಜಿ.ಶೆಟ್ಟಿ, ಕೆ.ಉದಯ ಕುಮಾರ್ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ದಿನೇಶ್ ಪುತ್ರನ್, ಸುಬ್ರಹ್ಮಣ್ಯ ಉಪಾಧ್ಯ, ರಾಘವೇಂದ್ರ ಭಟ್, ಮಧ್ವರಮಣ ಆಚಾರ್, ರಾಘವೇಂದ್ರ ತಂತ್ರಿ, ಶ್ರೀಧರ ಉಪಾಧ್ಯ, ವಿದ್ವಾನ್ ಹೆರ್ಗ ಹರಿಪ್ರಸಾದ್ ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಪೌರಾಯುಕ್ತ ರಾಯಪ್ಪ, ಪ್ರಸಾದ್ ರಾಜ್ ಕಾಂಚನ್, ಉದ್ಯಮಿ ಪುರುಷೋತ್ತಮ ಶೆಟ್ಟಿ, ಭುವನೇಂದ್ರ ಕಿದಿಯೂರು, ಶ್ರೀರಮಣ ಉಪಾಧ್ಯ, ಸೂರ್ಯನಾರಾಯಣ ಉಪಾಧ್ಯ ಕುಂಭಾಶಿ, ಕರ್ನಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಉಪಸ್ಥಿತರಿದ್ದರು.