ಮಂಗಳೂರು, ಎ18(Daijiworld News/SS): ಮಂಗಳೂರು ದಕ್ಷಿಣದ ಪದವು ಶಾಲೆಯ ಮತಗಟ್ಟೆಯಲ್ಲಿ ಅವ್ಯವಸ್ಥೆ ಕಾಣಿಸಿಕಂಡಿದ್ದು, ಮತದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ದಕ್ಷಿಣದ ಪದವು ಶಾಲೆಯ ಮತಗಟ್ಟೆ ಸಂಖ್ಯೆ 029ರಲ್ಲಿ ಅವ್ಯವಸ್ಥೆ ಕಾಣಿಸಿಕೊಂಡಿದ್ದು, ಮತದಾರರು ತೊಂದರೆಗೆ ಒಳಗಾಗಿದ್ದಾರೆ. ಇಲ್ಲಿನ ಮತಗಟ್ಟೆಯಲ್ಲಿ ಬೆಳಗ್ಗೆಯೇ ಇವಿಎಂ ಮಷಿನ್ ಕೈಕೊಟ್ಟು ತಡವಾಗಿ ಮತದಾನ ಪ್ರಾರಂಭಗೊಂಡಿತ್ತು. ಜೊತೆಗೆ, ಮತದಾನ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿಗಳ ಕೊರತೆಯೂ ಇದೆ. ಪರಿಣಾಮ, ಜನರಿಗೆ ಸಮಸ್ಯೆಯಾಗುತ್ತಿದೆ.
ಶಾಲೆಯ ಒಂದೇ ಬಾಗಿಲಿನ ಮೂಲಕ ಮತದಾರರನ್ನು ಕಳುಹಿಸುತ್ತಿರುವುದರಿಂದ ನೂಕುನುಗ್ಗಲು ಕೂಡ ಹೆಚ್ಚಾಗಿದೆ. ಹೀಗಾಗಿ, ಮತಗಟ್ಟೆಯಲ್ಲಿ ಅವ್ಯವಸ್ಥೆಯಿಂದ ಮತದಾರರು ಪರದಾಡುತ್ತಿದ್ದಾರೆ.
ಮತಗಟ್ಟೆಯ ಸಮಸ್ಯೆ ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ, ಮೊಬೈಲ್ ಮೂಲಕ ಸಮಸ್ಯೆಯನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದಾರೆ.