ಕಲ್ಲಡ್ಕ, ಡಿ 6 (DaijiworldNews/MS): ಆರ್ಎಸ್ ಎಸ್ ಹಿರಿಯ ನಾಯಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ಸಾರಥ್ಯದ ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿ.ಎಂ ಹೆಚ್.ಡಿ ಕುಮಾರಸ್ವಾಮಿ ಅತಿಥಿಯಾಗಿ ಬರಲಿರುವ ವಿಚಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ.
ವಿಧಾನಸಭಾ ಚುನಾವಣೆಯವರೆಗೂ ಹಿಂದೂಪರ ಸಂಘಟನೆಗಳಿಂದ ದೂರವಿದ್ದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ , ಇತ್ತೀಚೆಗೆ ಅವಶ್ಯಕತೆ ಇದ್ದರೆ ದತ್ತಮಾಲೆ ಧರಿಸುವುದಾಗಿ ತಿಳಿಸಿದ್ದರು. ಕಾನೂನು ಬಾಹಿರವಾದ ಯಾವ ಕೆಲಸವನನೂ ನಾನು ಮಾಡಲಾರೆ. ದತ್ತಮಾಲೆ ಧರಿಸುವುದು ಕಾನೂನು ಬಾಹಿರವಲ್ಲ. ಧರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದ್ದರು. ಬಿಜೆಪಿ ಜೊತೆ ಮೈತ್ರಿ ಬಳಿಕ ಬಲಕ್ಕೆ ವಾಲುತ್ತಿರುವ ಎಚ್ಡಿಕೆಯವರನ್ನು ಅಹ್ವಾನಿಸಿರುವುದು ರಾಜಕೀಯ ಹೊಂದಾಣಿಕೆಯ ಪ್ರತಿಫಲ ಹಾಗೂ ಕುಮಾರಸ್ವಾಮಿ ಅವರಿಗೆ ಹಿಂದುತ್ವ ಸಂಘಟನೆಗಳ ಕುರಿತು ಇರುವ ಮೃದು ಧೋರಣೆ ಕಾರಣವಿರಬಹುದೇ ಎಂಬ ಕುತೂಹಲ ಹುಟ್ಟುಹಾಕಿದೆ.
ಇದೀಗ ಕುಮಾರಸ್ವಾಮಿ ಅವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ಡಿಸೆಂಬರ್ 9 ರಂದು ನಡೆಯುವ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜಕೀಯ ವಲಯದಲ್ಲಿ ಒಂದಷ್ಟು ಸಂಚಲನ ಮೂಡಿಸುತ್ತಾರಾ ಎಂಬ ಪ್ರಶ್ನೆ ಮೂಡಿದೆ.
ಒಂದು ಕಾಲದಲ್ಲಿ ಆರ್.ಎಸ್.ಎಸ್ ನಿಷೇಧದ ಬಗ್ಗೆ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ರಾಮನಗರ ಎಂಟ್ರಿ ಕುರಿತಂತೆ ಕಿಡಿಕಾರಿದ್ದ, ಸೈದ್ದಾಂತಿಕ ಹಾಗೂ ರಾಜಕೀಯ ವೈರಿ ಜೆ.ಡಿ.ಎಸ್.ನ ಮಾಸ್ ಲೀಡರ್ ಕುಮಾರಸ್ವಾಮಿಯನ್ನೇ ಅತಿಥಿಯಾಗಿ ಅಹ್ವಾನಿಸಿದ ಕಲ್ಲಡ್ಕ ಭಟ್ ಲೆಕ್ಕಾಚಾರವೇನು ಎನ್ನುವ ಪ್ರಶ್ನೆಯೂ ಮೂಡಿದೆ.