ಮಂಗಳೂರು, ಡಿ 06 (DaijiworldNews/AA): ಟೆಲಿಗ್ರಾಂ ಆ್ಯಪ್ ಮೂಲಕ ಪಾರ್ಟ್ ಟೈಂ ಜಾಬ್ ಎಂದು ರೇಟಿಂಗ್ ನೀಡುವ ಟಾಸ್ಕ್ ನೀಡಿ ವ್ಯಕ್ತಿಯೊರ್ವರಿಗೆ 27.56 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ.
ಜೂ.19ರಂದು ದೂರುದಾರರಿಗೆ ಟೆಲಿಗ್ರಾಂನಲ್ಲಿ ಹೊಟೇಲ್ ಮತ್ತು ಹೋಮ್ ಸ್ಟೇಗಳಿಗೆ ರೇಟಿಂಗ್ ನೀಡುವ ಟಾಸ್ಕ್ ಪೂರ್ಣಗೊಳಿಸುವ ಪಾರ್ಟ್ ಟೈಂ ಜಾಬ್ ಮಾಡಿ ಹಣ ಗಳಿಸಬಹುದೆಂದು ಅಪರಿಚಿತ ವ್ಯಕ್ತಿಯೋರ್ವನಿಂದ ಸಂದೇಶ ಬಂದಿತ್ತು ಎನ್ನಲಾಗಿದೆ.
ಅಪರಿಚಿತ ವ್ಯಕ್ತಿಯ ಸಂದೇಶವನ್ನು ನಂಬಿದ ದೂರುದಾರರು 'ಅಧಿತಿ ಎಮ್ ಎಮ್ ಟಿ' ಎಂಬ ಗ್ರೂಪ್ ನಲ್ಲಿ 30 ಟಾಸ್ಕ್ ಪೂರ್ಣಗೊಳಿಸಿದ್ದರು. ಇದಕ್ಕಾಗಿ ಆ ವ್ಯಕ್ತಿ ಲಾಭಾಂಶವೆಂದು 900 ರೂ. ನೀಡಿದ್ದ. ಮತ್ತದೇ ದಿನ ದೂರುದಾರಿಂದ ಪುನಃ 11 ಸಾವಿರ ರೂ. ಹೂಡಿಕೆ ಮಾಡಿಸಿದ ವಂಚಕ ಒಮ್ಮೆ 20 ಸಾವಿರ ಹಾಗೂ ಮತ್ತೊಮ್ಮೆ 70 ಸಾವಿರ ರೂ. ಗಳನ್ನು ಲಾಭಾಂಶವೆಂದು ನೀಡಿರುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ರೀತಿ ಹಣ ಹೂಡಿಕೆ ಮಾಡಿದಲ್ಲಿ ಹೆಚ್ಚು ಲಾಭಾಂಶ ನೀಡುವುದಾಗಿ ವಂಚಕ ನಂಬಿಸಿದ್ದಾನೆ. ಅದರಂತೆ ಜೂ.19ರಿಂದ ಆ.26ರವರೆಗೆ ಹಂತಹಂತ ವಾಗಿ ಒಟ್ಟು 27,56,129 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡ ಆತ ಯಾವುದೇ ಲಾಭಾಂಶ ನೀಡದೇ ವಂಚಿಸಿರುತ್ತಾನೆ. ಈ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.