ಉಡುಪಿ, ಡಿ 6 (DaijiworldNews/MS): ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರ ನೇತೃತ್ವದಲ್ಲಿ, ಅಗಲಿದ ಮೈಸೂರು ದಸರಾದಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವು ನಗರದ ಮಾರುತಿ ವೀಥಿಕಾದಲ್ಲಿ ಮಂಗಳವಾರ ನಡೆಯಿತು. ಮೌನ ಪ್ರಾರ್ಥನೆ ಸಲ್ಲಿಸಿದ ಬಳಿಕ ಅರಣ್ಯಅಧಿಕಾರಿಗಳು, ನಾಗರಿಕ ಸಮಿತಿಯ ಕಾರ್ಯಕರ್ತರು, ಪ್ರಾಣಿಪ್ರೀಯರು, ಸಾರ್ವಜನಿಕರು ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪ ವಲಯ ಅರಣ್ಯಾಧಿಕಾರಿಗಳಾದ ಗುರುರಾಜ್, ಜೀವನದಾಸ್, ಗಸ್ತು ಅರಣ್ಯ ಪಾಲಕರಾದ ಕೇಶವ ಪೂಜಾರಿ, ಚರಣ್ ರಾಜ್, ಮಂಜುನಾಥ್, ಅಭಿಲಾಶ್, ಅರಣ್ಯ ಸಿಬ್ಬಂದಿ ಜೋಯ್, ಹಾಗೂ ಜೋಸ್ ಆಲೂಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಎನ್ ಆರ್, ಪ್ರಾಣಿ ದಯಾ ಸಂಘದ ಮಂಜುಳಾ, ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಶಿರೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವಪ್ರಸಿದ್ಧ ಮೈಸೂರು ದಸರೆಯಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಗಜರಾಜ ಅರ್ಜುನ ಆನೆಯು ಸಕಲೇಶಪುರದ ಯಸಳೂರಿನಲ್ಲಿ ಕಾಡನೆಯನ್ನು ಸೆರೆ ಹಿಡಿಯುವ ಕಾರ್ಯಚರಣೆಯಲ್ಲಿ ಗಾಯಗೊಂಡು, ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿರುವ ಘಟನೆ ನಡೆದಿತ್ತು. ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ರಾಜ ಗಾಂಭೀರ್ಯ ನಡಿಗೆಯ ಅರ್ಜುನನ ಅಗಲಿಕೆ ಕೋಟ್ಯಾಂತರ ಪ್ರಾಣಿ ಪ್ರೇಮಿಗಳಿಗೆ ನೋವುಂಟಾಗಿತ್ತು.