ಕುಂದಾಪುರ, ಡಿ 05 (DaijiworldNews/AK): ಚಿಕ್ಕಮಗಳೂರಿನ ಯುವ ನ್ಯಾಯವಾದಿ ಪ್ರೀತಮ್ ಅವರ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಮತ್ತು ಇತರ ಪೊಲೀಸರು ನಡೆಸಿದ ಅಮಾನುಷ ಹಲ್ಲೆಯನ್ನು ಖಂಡಿಸಿ ಇವತ್ತು ಕುಂದಾಪುರ ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು.
ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಿದ ನ್ಯಾಯವಾದಿಗಳು, ತಪ್ಪಿತಸ್ಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗಡೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಸೋಮನಾಥ ಹೆಗಡೆ ಮಾತನಾಡಿ, ಪೊಲೀಸರು ಹಾಗೂ ನ್ಯಾಯವಾದಿಗಳು ಒಂದು ನಾಣ್ಯದ ಎರಡು ಮುಖಗಳು ಇದ್ದ ಹಾಗೇ. ಆದರೆ, ಈಗಿನ ಕಾಲಘಟ್ಟದಲ್ಲಿ ರಾಜ್ಯಾದ್ಯಂತ ಪೊಲೀಸರು, ವಕೀಲರ ವಿರುದ್ಧ ಬೇರೆ ಬೇರೆ ಕಾರಣಕ್ಕೆ ಹಲ್ಲೆ ಮಾಡುತ್ತಿರುವುದು ನೋಡಿದರೆ ವಕೀಲರೆಲ್ಲ ಬೆಚ್ಚಿ ಬೀಳುವ ಸನ್ನಿವೇಶ ನಿರ್ಮಾಣವಾಗಿದೆ.
ಈಗಾಗಲೇ ವಕೀಲರ ಹಿತ ರಕ್ಷಣಾ ಸಮಿತಿ ಜಾರಿಗೆ ತರಬೇಕೆಂದು ಸರಕಾರಕ್ಕೆ ಮನವಿ ಮಾಡಿದ್ದೇವೆ ಹಾಗೂ ಯುವ ನ್ಯಾಯವಾದಿಯ ಮೇಲೆ ಅಮಾನುಷ ಹಲ್ಲೆ ನಡೆಸಿದವರ ಮೇಲೆ ತಕ್ಷಣ ಸರ್ಕಾರ, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಕುಂದಾಪುರ ವಕೀಲರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.