ಬಂಟ್ವಾಳ, ಡಿ 5(DaijiworldNews/SK): ಬಿಸಿರೋಡಿನ ವಿವೇಕನಗರ ರಸ್ತೆಯ ಗುಂಡಿಯನ್ನು ಅಧಿಕಾರಿಯೋರ್ವರು ಕಾಂಕ್ರೀಟ್ ಹಾಕಿ ಮುಚ್ಚಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಬಿ.ಸಿ.ರೋಡಿನ ಬಸ್ ನಿಲ್ದಾಣದ ಮುಂಭಾಗದ ಸರ್ವೀಸ್ ರಸ್ತೆಯಿಂದ ವಿವೇಕ ನಗರ ರಸ್ತೆಗೆ ಪ್ರವೇಶ ಮಾಡುವ ಭಾಗದಲ್ಲಿ ರಸ್ತೆಯನ್ನು ಉದ್ದಕ್ಕೆ ಅಗೆದು ಹಾಕಲಾಗಿದ್ದು, ಬಳಿಕ ಅದನ್ನು ಮುಚ್ಚದ ಕಾರಣದಿಂದಾಗಿ ವಾಹನಸವಾರರು ಸಂಕಷ್ಟಕ್ಕೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಇಲ್ಲಿನ ಹೋಟೆಲ್ ಒಂದರ ಮಾಲಕ ನೀರಿನ ಪೈಪ್ ಅಳವಡಿಕೆಯ ಸಂದರ್ಭದಲ್ಲಿ ಕಾಂಕ್ರೀಟ್ ರಸ್ತೆಯನ್ನು ಅಗೆದುಹಾಕಿ ಹೋಗಿದ್ದರು. ಇದು ಪುರಸಭಾ ಸಹಿತ ಸಂಬಂಧಿಸಿದ ಎಲ್ಲಾ ಇಲಾಖೆಯ ಅಧಿಕಾರಗಳ ಕಣ್ಣಿಗೆ ಬಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ, ಕನಿಷ್ಠ ಪಕ್ಷ ಅಗೆದು ಹಾಕಿದ ವ್ಯಕ್ತಿಯನ್ನು ಕರೆದು ಕಾಂಕ್ರೀಟ್ ಹಾಕಿಸುವ ಕೆಲಸ ಕೂಡ ಮಾಡಿಲ್ಲ ಎಂಬ ಆರೋಪ ವ್ಯಕ್ತವಾಗಿತ್ತು. ಆದರೆ ಇಲಾಖೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೌನವಾಗಿಯೇ ಕುಳಿತುಕೊಂಡಿತ್ತು.
ಈ ರಸ್ತೆಯಲ್ಲಿ ಹತ್ತಾರು ಮನೆಗಳಿದ್ದು, ಮಕ್ಕಳ ಆಸ್ಪತ್ರೆ ಹಾಗೂ ಶಾಲೆಯೊಂದಿದೆ. ಇಲ್ಲಿಗೆ ಬಂದು ಹೋಗುವ ವಾಹನ ಸವಾರರು ಜೀವ ಭಯದಿಂದ ವಾಹನಗಳನ್ನು ರಸ್ತೆಗೆ ಇಳಿಸುತ್ತಿದ್ದರು. ಇದನ್ನು ಕಂಡ ಇಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಿಂದಿಯಾ ನಾಯಕ್ ಅವರು ಪುರಸಭೆಗೆ ಆರಂಭದಲ್ಲಿ ಮೌಖಿಕವಾಗಿ ತಿಳಿಸಿದ್ದರೆ, ಬಳಿಕ ಲಿಖಿತವಾಗಿ ರಸ್ತೆಯನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಆದರೆ ಯಾವುದಕ್ಕೂ ಬೆಲೆ ಕೊಡದೆ ಮೌನವಾಗಿದ್ದ ಇಲಾಖೆಯ ಸಹವಾಸ ಬೇಡ ಎಂದು ಸ್ವತಃ ಕಾಂಕ್ರೀಟ್ ಹಾಕಿಸಿದ್ದಾರೆ. ರಾತ್ರಿ ವೇಳೆ ವಾಹನಗಳ ಓಡಾಟ ಕಡಿಮೆ ಇರುವ ಕಾರಣ ಸೋಮವಾರ ರಾತ್ರಿ ವೇಳೆ ಕಾಂಕ್ರೀಟ್ ಹಾಕಲಾಗಿದೆ ಎಂದು ತಿಳಿದು ಬಂದಿದೆ.