ಉಡುಪಿ, ಎ18(Daijiworld News/SS): ಉಡುಪಿ ಜಿಲ್ಲೆ ಹೆಬ್ರಿಯ ಇಂದಿರಾನಗರ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಇಂದು ವಿವಾಹವಾಗಬೇಕಿದ್ದ ವಧು ಅಕ್ಷತ ಪ್ರಥಮ ಮತದಾರರಾಗಿ ಮತ ಚಲಾಯಿಸಿದ್ದಾರೆ. ವಧು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಮದುವೆ ಜೀವನದ ಬಹುದೊಡ್ಡ ಸಂಭ್ರಮ. ಆದರೆ ಮತದಾನ ಅದಕ್ಕಿಂತಲೂ ದೊಡ್ಡ ಸಂಭ್ರಮವಾಗಿದ್ದು ಉಡುಪಿಯ ಹೆಬ್ರಿಯಲ್ಲಿ ಮದು ಮಗಳು ಮತ ಚಲಾಯಿಸಿದ್ದಾರೆ. ತಮ್ಮ ಮದುವೆ ವಿಧಿ ವಿಧಾನಗಳಿಗೆ ತೆರಳುವ ಮುನ್ನ ಆಕೆ ತಮ್ಮ ಹಕ್ಕನ್ನು ಚಲಾಯಿಸಿಯೇ ತೆರಳಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಕೂಡ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಸಂದೇಶ ನೀಡಿದ್ದಾರೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆಯೇ ಮತದಾನಕ್ಕೆ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದು, ಚುರುಕಿನಿಂದ ಮತದಾನ ನಡೆಯುತ್ತಿದೆ.
ಪ್ರಜಾಪ್ರಭುತ್ವದ ಹಬ್ಬ, ಭವಿಷ್ಯಕ್ಕಾಗಿ ಪ್ರಜೆಗಳು ತಮ್ಮ ಪವರ್ ತೋರಿಸುವ ಅವಕಾಶ ಬಂದಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಹಳ ಉತ್ಸಾಹದಿಂದ ಮತದಾರ ಪ್ರಭುಗಳು ಮತದಾನ ಮಾಡುತ್ತಿದ್ದಾರೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.