ಕುಂದಾಪುರ,ಡಿ 04 (DaijiworldNews/MS): ರಜತ ಮಹೋತ್ಸವದ ಸಂಭ್ರಮಾಚರಣೆಯ ಹೊಸ್ತಿಲಲ್ಲಿ ಇರುವ ಹಟ್ಟಿಯಂಗಡಿಯ ಸಿದ್ಧಿವಿನಾಯಕ ಶಾಲೆಯ ವಿದ್ಯಾರ್ಥಿಗಳು ಭಾನುವಾರ ರೋಟೇಟಿಂಗ್ ರೂಬಿಕ್ ಕ್ಯೂಬ್ ನಲ್ಲಿ ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ ಸಂಸ್ಥಾಪಕ ಹಾಗೂ ಹಿರಿಯ ಧಾರ್ಮಿಕ ನೇತಾರರಾಗಿದ್ದ ಹೆಚ್.ರಾಮಚಂದ್ರ ಭಟ್ ಅವರ ಮೊಸಾಯಿಕ್ ಭಾವಚಿತ್ರವನ್ನು ಅರಳಿಸುವ ಮೂಲಕ ನೂತನ ಗಿನ್ನಿಸ್ ದಾಖಲೆಯನ್ನು ಮಾಡಿದ್ದಾರೆ.
ಭಾನುವಾರ ಮಧ್ಯಾಹ್ನ 3 ಗಂಟೆಯ ವೇಳೆಯಲ್ಲಿ ಜಗತ್ತಿನಲ್ಲಿ ಮೊದಲ ಬಾರಿಗೆ 1,228ಮಂದಿಯ ಪಾಲ್ಗೊಳ್ಳುವಿಕೆಯ ರೋಟೇಟಿಂಗ್ ಫಸಲ್ ಕ್ಯೂಬ್ ಮೊಸಾಯಿಕ್ ಚಿತ್ರವನ್ನು ಪೂರ್ಣ ಮಾಡುವ ಮೂಲಕ ನೂತನ ವಿಶ್ವ ದಾಖಲೆಯನ್ನು ಗಿನ್ನಿಸ್ ದಾಖಲೆಯ ಪುಸ್ತಕಕ್ಕೆ ಸೇರಿಸಿದ್ದಾರೆ.
ಹಟ್ಟಿಯಂಗಡಿಯ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಡಿ.1 ರಿಂದ ಆರಂಭವಾದ ಕ್ಯೂಬ್ ಮೊಸಾಯಿಕ್ ಚಿತ್ರ ರಚನೆಗಾಗಿ ವಿದ್ಯಾರ್ಥಿಗಳು, ಪ್ರಾಂಶುಪಾಲರು, ಆಡಳಿತಾಧಿಕಾರಿ, ಶಿಕ್ಷಕರು, ಸಿಬ್ಬಂದಿಗಳು ಹಾಗೂ ಹಿತೈಷಿಗಳು ಸೇರಿ ಒಟ್ಟು 1,228 ಮಂದಿ 1,228 ರೋಟೇಟಿಂಗ್ ರೂಬಿಕ್ ಕ್ಯೂಬ್ಗಳನ್ನು ಬಳಸಿಕೊಂಡು 7.75 ಉದ್ದ ಹಾಗೂ 5.625 ಅಡಿ ಅಗಲದ 42.78 ಚ.ಅಡಿ ವಿಸ್ತಿರ್ಣದಲ್ಲಿ ಹೆಚ್.ರಾಮಚಂದ್ರ ಭಟ್ ಅವರ ಭಾವಚಿತ್ರವನ್ನು ಅನಾವರಣ ಮಾಡಲಾಗಿದೆ. ಪ್ರಸ್ತುತ ಯು.ಕೆ ಯ ರೂಬಿಕ್ಸ್ ಬ್ರಾಂಡ್ ಲಿಮಿಟೆಡ್ 308 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಮಾಡಿರುವ ರೋಟೇಟಿಂಗ್ ರೂಬಿಕ್ ಕ್ಯೂಬ್ ಫಸಲ್ ರಚನೆ ಈವರೆಗಿನ ಗಿನ್ನಿಸ್ ದಾಖಲೆಯಾಗಿತ್ತು.
ಗಿನ್ನಿಸ್ ದಾಖಲೆ ಘೋಷಣೆ:
ಕಳೆದ ನಾಲ್ಕು ದಿನಗಳಿಂದ ಪ್ರತ್ಯಕ್ಷದರ್ಶಿಯಾಗಿ ಬೀಡು ಬಿಟ್ಟಿದ್ದ ಗಿನ್ನಿಸ್ ಸಂಸ್ಥೆಯ ಅಜ್ಯೂರಿಕೇಟರ್ ರಿಷಿನಾಥ್ ಸಾಧನೆಯ ಪರಿಶೀಲನೆ ನಡೆಸಿ, ದಾಖಲೆಯನ್ನು ಖಚಿತಪಡಿಸಿಕೊಂಡು, ನೂತನ ಗಿನ್ನಿಸ್ ವಿಶ್ವ ದಾಖಲೆಯ ಘೋಷಣೆ ಮಾಡಿದ ಬಳಿಕ ಹಟ್ಟಿಯಂಗಡಿ ಸಿದ್ಧಿವಿನಾಯಕ ಶಾಲೆಯ ಪ್ರಾಂಶುಪಾಲ ಹೆಚ್.ಶರಣ್ಕುಮಾರ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಶ್ರೀ ಸಿದ್ಧಿ ಶೈಕ್ಷಣಿಕ ಸಂಸ್ಥೆಯ ರಮಾದೇವಿ ಆರ್ ಭಟ್, ಉಪಾಧ್ಯಕ್ಷ ಹೆಚ್.ಬಾಲಚಂದ್ರ ಭಟ್, ಆಡಳಿತಾಧಿಕಾರಿ ವೀಣಾರಶ್ಮಿ ಹಾಗೂ ಗಿನ್ನಿಸ್ ದಾಖಲೆಯ ಮಾರ್ಗದರ್ಶಕ ಪೃಥ್ವೀಶ್.ಕೆ, ಆಡಳಿತ ಮಂಡಳಿಯ ಡಾ.ಎನ್.ಪಿ.ನಾರಾಯಣ ಶೆಟ್ಟಿ, ಉಪಪ್ರಾಂಶುಪಾಲ ರಾಮ ದೇವಾಡಿಗ ಇದ್ದರು.
ಮೊದಲ ದಾಖಲೆ :
ನ.30 ರಂದು ಹಟ್ಟಿಯಂಗಡಿ ಸಿದ್ಧಿವಿನಾಯಕ ವಸತಿ ಶಾಲೆಯ 50 ವಿದ್ಯಾರ್ಥಿಗಳು 6000 ಕ್ಯೂಬ್ ಗಳನ್ನು ಬಳಸಿಕೊಂಡು 19.198 ಚ.ಮೀ ವಿಸ್ತೀರ್ಣದಲ್ಲಿ ಒಂದು ಬದಿಯಲ್ಲಿ ದೇಶದ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಹಾಗೂ ಇನ್ನೊಂದು ಬದಿಯಲ್ಲಿ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರ ಡ್ಯುಯಲ್ ಸೈಡೆಡ್ ರೋಟೇಟಿಂಗ್ ಫಸಲ್ ರೂಬಿಕ್ ಕ್ಯೂಬ್ ಮೊಸಾಯಿಕ್ ಭಾವಚಿತ್ರವನ್ನು ಅನಾವರಣಗೊಳಿಸುವ ಮೂಲಕ ಈ ಹಿಂದಿನ ಕಝಾಕಿಸ್ತಾನದ ಝೆಂಗಿಸ್ ಐಟ್ಜಾನೋವ್ 5100 ಕ್ಯೂಬ್ ಗಳೊಂದಿಗೆ ನಿರ್ಮಿಸಿದ್ದ 15.878 ಚ.ಮೀಟರ್ ವಿಸ್ತಿರ್ಣದ ದಾಖಲೆಯನ್ನು ಮುರಿದು ನೂತನ ಗಿನ್ನಿಸ್ ದಾಖಲೆ ಮಾಡಿದ್ದರು.