ಮಂಗಳೂರು,ಡಿ02(DaijiworldNews/RA): ಮಹಿಳೆಯೊಬ್ಬರು ತನ್ನ ನಾಲ್ಕುವರೆ ತಿಂಗಳ ಮಗುವನ್ನು ಟ್ಯಾಂಕ್ ನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿ ಆ ಬಳಿಕ ತಾನೂ ಕೂಡ ಕಿಟಕಿಯ ಕಬ್ಬಿಣದ ಸರಳಿಗೆ ಸೀರೆ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಗುಜ್ಜರಕೆರೆಯಲ್ಲಿ ನಡೆದಿದೆ.
ಗುಜ್ಜರಕೆರೆಯ ಅಪಾರ್ಟ್ಮೆಂಟ್ ನ ಫ್ಲಾಟ್ ವೊಂದರಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತರನ್ನು ನಾಲ್ಕುವರೆ ವರ್ಷದ ಮಗು ಅಬ್ದುಲ್ಲಾ ಹೂದ್ ಮತ್ತು ತಾಯಿ ಫಾತಿಮಾ ರುಕಿಯಾ(23) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನಲೆ:
ಖತಿಜಾತುಲ್ ಕುಬ್ರ ರವರ ಮಗಳಾದ ಫಾತಿಮಾ ರುಕಿಯಾ ಅವರನ್ನು ಸುಮಾರು ಒಂದೂವರೆ ವರ್ಷದ ಹಿಂದೆ ಮುಹಮ್ಮದ್ ಉನೈಸ್ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು.
ಜುಲೈ 7 ರಂದು ಫಾತಿಮಾ ರುಕಿಯಾಯವರಿಗೆ ಹೆರಿಗೆಯಾಗಿದ್ದು ಈ ದಂಪತಿಗಳಿಗೆ ಸುಮಾರು ನಾಲ್ಕುವರೆ ತಿಂಗಳ ಅಬ್ದುಲ್ಲಾ ಹೂದ್ ಎಂಬ ಗಂಡು ಮಗುವಿತ್ತು. ಆ ಬಳಿಕ ರುಕಿಯಾರವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ತಾಯಿ ಖತಿಜಾತುಲ್ ಕುಬ್ರ ಬಳಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳ್ತಾ ಇದ್ದರಂತೆ. ಹೀಗಾಗಿ ಮಹಿಳೆಯ ತಾಯಿ ನಗರದ ಆರೋಗ್ಯ ಕ್ಲಿನಿಕ್ ನಲ್ಲಿ ಮಾನಸಿಕ ವೈದ್ಯರಲ್ಲಿ ಚಿಕಿತ್ಸೆ ಕೊಡಿಸುತ್ತಿದರು ಎನ್ನಲಾಗಿದೆ.
ಇನ್ನು ಇಂದು ಬೆಳಗ್ಗೆ 11 ಗಂಟೆಯಿಂದ ಮದ್ಯಾಹ್ನ 1.30 ಗಂಟೆಯ ಮಧ್ಯೆ ಮನೆಯಲ್ಲಿ ಯಾರು ಇಲ್ಲದ ಸಮಯ ರುಕಿಯಾ ತಾನು ವಾಸವಾಗಿದ್ದ ಅಪಾರ್ಟ್ಮೆಂಟ್ ನ ಫ್ಲಾಟ್ ಬೆಡ್ ರೂಮ್ ನ ಗ್ಯಾಲರಿಯಲ್ಲಿ ಪ್ಲಾಸ್ಟಿಕ್ ಟಬ್ ನಲ್ಲಿ ನೀರು ತುಂಬಿಸಿ ತನ್ನ ನಾಲ್ಕುವರೆ ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಫಾತಿಮಾ ರುಕಿಯಾರವರು ಕೂಡ ರೂಮಿನ ಕಿಟಕಿಯ ಕಬ್ಬಿಣದ ಸರಳಿಗೆ ಸೀರಿಯಿಂದ ಕಟ್ಟಿ ಮತ್ತೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೃತರ ತಾಯಿ ನೀಡಿದ ದೂರಿನಂತೆ ನಗರದ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821