ಮಂಗಳೂರು ನ 14: ಪಡೀಲ್ ನ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಒಬ್ಬ ಪಿಂಪ್ ಹಾಗೂ ಇಬ್ಬರು ಗಿರಾಕಿಗಳನ್ನು ಸೇರಿ ಮೂವರನ್ನು ಮಂಗಳೂರು ಸಿಸಿಬಿ ಪೊಲೀಸರು ನವೆಂಬರ್ 11 ರಂದು ಬಂಧಿಸಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಡೀಲ್ ನ ತುಂಬೆ ಪ್ಲಾಝಾ ಆಪಾರ್ಟ್ ಮೆಂಟ್ ನ 10 ನೇ ಮಹಡಿಯ 1005 ನಂಬರ್ ಮನೆಯಲ್ಲಿ ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಈ ಕುರಿತ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿ, ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಅಬ್ದುಲ್ ನಾಸೀರ್ ಯಾನೆ ಶಾನ್(36), ಇಸ್ಮಾಯಿಲ್ ಯಾನೆ ಅಜ್ಮಲ್ (36), ಸಮೀರ್ ಬಾಷಾ ಯಾನೆ ಬಾಷಾ (28), ಎಂದು ಗುರುತಿಸಲಾಗಿದೆ. ಇವರಿಂದ 21,750 ರೂ ನಗದು , 5 ಮೊಬೈಲ್ ಫೋನ್ ಗಳು ಸೇರಿ ಒಟ್ಟು ರೂ. 36,750 ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ .ಆರೋಪಿಗಳ ಪೈಕಿ ಅಬ್ದುಲ್ ನಾಸೀರ್ ಎಂಬಾತನು ತುಂಬೆ ಫ್ಲಾಝಾ ಆಪಾರ್ಟ್ ಮೆಂಟ್ ನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು ಯುವತಿಯರನ್ನು ಈ ಫ್ಲಾಟ್ ನಲ್ಲಿ ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆಗೆ ಬಳಸಿಕೊಂಡು ಹಣವನ್ನು ಗಳಿಸುತ್ತಿದ್ದ.ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿದ್ದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಘಟನೆ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.