ಕಾಸರಗೋಡು, ಡಿ 2 (DaijiworldNews/HR): ಕಳವುಗೈದ ಆಂಬ್ಯುಲೆನ್ಸ್ ಅಪಘಾತಕ್ಕೀಡಾದ ಘಟನೆ ಉಪ್ಪಳ ದಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಪ್ಪಳ ಪತ್ವಾಡಿಯ ಮುಹಮ್ಮದ್ ನೌಫಲ್ ಯಾನೆ ಸವಾದ್ (21) ಬಂಧಿತ ಆರೋಪಿ.
ಪಚ್ಲಂಪಾರೆಯ ಮುಹಮ್ಮದ್ ರಿಯಾಝ್ ರವರ ಉಪ್ಪಳದ ಖಾಸಗಿ ಆಸ್ಪತ್ರೆ ಪರಿಸರದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ಶುಕ್ರವಾರ ಸಂಜೆ ಕಳವುಗೀಡಾಗಿತ್ತು. ಕೀಲಿ ಕೈಯನ್ನು ಆಂಬ್ಯುಲೆನ್ಸ್ ನಲ್ಲಿಯೇ ಇರಿಸಿ ತೆರಳಿದ್ದು, ಸ್ವಲ್ಪ ಕಳೆದು ರಿಯಾಝ್ ಬಂದಾಗ ಆಂಬುಲೆನ್ಸ್ ನಾಪತ್ತೆಯಾಗಿತ್ತು.
ಇನ್ನು ಮುಹಮ್ಮದ್ ರಿಯಾಝ್ ಅವರು ತಕ್ಷಣ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ವಾಹನದ ಜಿಪಿ ಎಸ್ ವ್ಯವಸ್ಥೆ ಮೂಲಕ ಹಿಂಬಾಲಿಸಿದ್ದು, ಈ ನಡುವೆ ಆಂಬುಲೆನ್ಸ್ ಬಡಾಜೆ ಚೌಕಿಯಲ್ಲಿ ಆವರಣ ಗೋಡೆಗೆ ಬಡಿದು ಅಪಘಾತ ಕ್ಕೀಡಾಗಿದ್ದು, ಈ ಸಂದರ್ಭದಲ್ಲಿ ಅಲ್ಲಿಗೆ ತಲಪಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನೌಫಲ್ ಈ ಹಿಂದೆ ಆಟೋ ರಿಕ್ಷಾ ಕಳವು ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ.