ಮಂಗಳೂರು, ಡಿ 02 (DaijiworldNews/AA): ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನಿನ ಅವಶ್ಯಕತೆ ಇದೆ. ಈ ಬಗ್ಗೆ ಕಾನೂನಿನಲ್ಲಿ ಬದಲಾವಣೆ ಅಗತ್ಯವಿದೆಯೇ ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಆವರಣದ ಉಸ್ತುವಾರಿ ಸಚಿವರ ಕಾರ್ಯಾಲಯದಲ್ಲಿ ಇಂದು ಬೆಳಗ್ಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ಯಾನಿಂಗ್ ಸೆಂಟರ್ ಗಳು ಸೇರಿದಂತೆ ಹಲವು ಕಡೆ ಪರಿಶೀಲನೆ ನಡೆಸಬೇಕಿದೆ. ಇದರೊಂದಿಗೆ ಕೆಲ ಗುಪ್ತಚರ ಮಾಹಿತಿಗಳನ್ನು ಕಲೆ ಹಾಕಬೇಕಿದೆ ಎಂದರು.
ಭ್ರೂಣ ಹತ್ಯೆ ದಂಧೆಯಲ್ಲಿ ಯಾರೆಲ್ಲ ಇದ್ದಾರೆ. ಯಾರು ಭ್ರೂಣ ಹತ್ಯೆ ಮಾಡುತ್ತಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಬೇಕಿದೆ. ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಆರೋಗ್ಯ ಇಲಾಖೆ ಕೂಡ ಕೈ ಜೋಡಿಸಬೇಕು. ಪೊಲೀಸ್ ಇಲಾಖೆಗೆ ಸಹಕಾರ ಕೊಟ್ಟು ನಿಜಾಂಶ ತಿಳಿಯುವ ಕಾರ್ಯ ಆಗಬೇಕಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಭ್ರೂಣ ಹತ್ಯೆ ಪ್ರಕರಣದ ಆರೋಪವನ್ನು ಎದುರಿಸುತ್ತಿದ್ದ ವೈದ್ಯ ಸತೀಶ್ ಆತ್ಮಹತ್ಯೆ ಕೇಸ್ ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ ಅವರು, ನಾನು ಎಲ್ಲಾ ಕಡೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇನೆ. ಸತೀಶ್ ಆಯುಷ್ ಅಧಿಕಾರಿಯಾಗಿದ್ದರು. ಅವರು ಆತ್ಮಹತ್ಯೆಯನ್ನು ಯಾಕೆ ಮಾಡಿಕೊಂಡಿದ್ದಾರೆಂದು ಗೊತ್ತಿಲ್ಲ. ಅವರ ಆತ್ಮಹತ್ಯೆಗೂ ಭ್ರೂಣ ಹತ್ಯೆ ಕೇಸ್ ಗೂ ಸಂಬಂಧ ಇದೆಯೋ ಇಲ್ಲವೋ ತಿಳಿದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸಲಿದೆ ಎಂದರು.