ಮಂಗಳೂರು, ಡಿ 02 (DaijiworldNews/AA): ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಗೆ ಸಂಬಂಧಪಟ್ಟಂತೆ ಜಿಲ್ಲಾ ಚುನಾವಣಾ ಉಸ್ತುವಾರಿ, ಸಚಿವ ಮಧು ಬಂಗಾರಪ್ಪ ಎರಡನೇ ಸುತ್ತಿನ ಮಹತ್ವದ ಸಭೆಯನ್ನು ಇಂದು ನಡೆಸಲಿದ್ದಾರೆ.
ಹೀಗಾಗಿ ಈ ಸಭೆಯಲ್ಲಿ ಪಕ್ಷದ ಜಿಲ್ಲೆಯ ಎಲ್ಲಾ ಪ್ರಮುಖ ನಾಯಕರು ಭಾಗವಹಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನಿರ್ದೇಶಿಸಿದ್ದಾರೆ.
ಸಚಿವ ಮಧು ಬಂಗಾರಪ್ಪ ಅವರು 2 ತಿಂಗಳ ಹಿಂದಷ್ಟೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಸಭೆ ಅವರು ಸಭೆ ನಡೆಸಿದ್ದರು. ಸಭೆಯಲ್ಲಿ ವ್ಯಕ್ತವಾದ ಪಕ್ಷದ ಹಿರಿಯ ಮುಖಂಡರು, ಮಾಜಿ ಸಂಸದರು, ಮಾಜಿ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳ ಅಭಿಪ್ರಾಯ ಸಂಗ್ರಹಿಸಿ ಅವರು ಅದನ್ನೆಲ್ಲ ಕ್ರೋಡೀಕರಿಸಿ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಗುಪ್ತ ವರದಿ ನೀಡಿದ್ದರು.
ಇದೀಗ ರಾಜ್ಯಾಧ್ಯಕ್ಷರ ಸೂಚನೆಯ ಮೇರೆಗೆ ಇಂದು ಸಂಜೆ 5.30ಕ್ಕೆ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸಿ ನಾಯಕರಿಂದ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಇನ್ನು ಈ ಸಭೆಯ ವರದಿಯನ್ನು ಸಚಿವರು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಸಲ್ಲಿಸಲಿದ್ದಾರೆ.