ಉಡುಪಿ, ಡಿ 02 (DaijiworldNews/MS): ಕರ್ನಾಟಕ ರಾಜ್ಯದಲ್ಲಿ ಬರಗಾಲದಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ರೈತರ ಬೆಳೆಗಳು ನಷ್ಟವಾಗಿ ರೈತರ ಬದುಕು ದುಸ್ತರವಾಗಿದೆ. ಅನಾವೃಷ್ಟಿಯಿಂದ ಉಂಟಾಗಿರುವ ಹಾನಿಗಳ ಬಗ್ಗೆ ಕೇಂದ್ರ ಸರಕಾರಕ್ಕೆ ವರದಿಯನ್ನು ನೀಡಲಾಗಿದೆ. ಇದುವರೆಗೆ ಕೇಂದ್ರದಿಂದ ನಯಾಪೈಸೆ ಪರಿಹಾರ ಬಂದಿಲ್ಲ, ಉಡುಪಿ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೌನ ತಾಳಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.
ಕರ್ನಾಟಕ ಸರಕಾರವು 4.50 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ನೀಡುತ್ತಿದೆ. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರಕ್ಕೆ ಎಷ್ಟು ಅನುದಾನ ನೀಡುತ್ತಿದೆ ಎಂದು ಶೋಭಾ ಕರಂದ್ಲಾಜೆ ಜನತೆಗೆ ತಿಳಿಸಲಿ. ವಿಕಸಿತ ಭಾರತ ಸಂಕಲ್ಪಯಾತ್ರೆ ಎನ್ನುವ ನೆಪದಿಂದ ಚುನಾವಣಾ ಪ್ರಚಾರ ಕಾರ್ಯಕ್ಕೆ ಕ್ಷೇತ್ರಕ್ಕೆ ಬರುವುದು ಮತ್ತು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದು ಇದಷ್ಟೇ ಸಂಸದರ ಜವಾಬ್ದಾರಿ ಎಂದು ಅರಿತುಕೊಂಡಂತಿದೆ ಶೋಭಾ ಕರಂದ್ಲಾಜೆ.
ಇತ್ತೀಚೆಗೆ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸುವಂತ ಘಟನೆಯಾಯಿತು, ಜಿಲ್ಲೆಯ ಇತಿಹಾಸದದಲ್ಲಿಯೇ ಪ್ರಥಮ ಬಾರಿಗೆ ನಡೆದಂತಹ ಒಂದೇ ಕುಟುಂಬದ ನಾಲ್ಕು ಜನರ ಬರ್ಬರ ಕೊಲೆಯು ಶೋಭಾ ಕರಂದ್ಲಾಜೆಯವರ ಸಂಸದೀಯ ಕ್ಷೇತ್ರದ ನೇಜಾರು ಎಂಬಲ್ಲಿ ನಡೆಯಿತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆದಿದ್ದ ಈ ದುರ್ಘಟನೆಯನ್ನು ಆ ಖಂಡಿಸಿ ಸಡಗರದ ಹಬ್ಬವನ್ನು ಆಚರಿಸದಿರಲು ನಿರ್ಧರಿಸಿ ಶೋಕ ವ್ಯಕ್ತಪಡಿಸಿ ಮಾನವೀಯತೆಯ ಧರ್ಮವನ್ನು ಮೆರೆದಿದ್ದರೆ, ಕ್ಷೇತ್ರವ ಸಂಸದೆ ಮಾತ್ರ ಈ ಘಟನೆಯನ್ನು ಖಂಡಿಸದೇ ಮತ್ತು ಯಾವುದೇ ರೀತಿಯ ಕಾನೂನು ಪ್ರಕ್ರಿಯೆಗೆ ಪ್ರಯತ್ನ ಮಾಡದಿರುವುದು, ಹಾಗೂ ಇದರ ಬಗ್ಗೆ ಚಕಾರವೆತ್ತದೆ ಮೌನ ತಾಳಿರುವುದು ಇವರ ಸಂಕುಚಿತ ಮನುಸ್ಥಿತಿಯನ್ನು ಬೆಂಬಿಸುತ್ತಿದೆ. ಜಿಲ್ಲೆಗೆ ಆಗಮಿಸಿಯೂ ಸೌಜನ್ಯಕ್ಕಾದರೂ ಮಾನವೀಯ ನೆಲೆಯಲ್ಲಿ ಒಬ್ಬ ಜನ ಪ್ರತಿನಿಧಿಯಾಗಿ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳದಿರುವುದು ಇವರ ಅಮಾನವೀಯತೆಗೆ ಸಾಕ್ಷಿ.
ಕೇಂದ್ರ ಸರ್ಕಾರವು ರಾಜ್ಯಕ್ಕೆ ಯಾವುದೇ ರೀತಿಯ ಸಹಕಾರ ನೀಡದಿದ್ದರೂ ಇಲ್ಲಿ ಬಂದು ರಾಜ್ಯ ಸರ್ಕಾರವನ್ನು ಟೀಕಿಸುವುದು ಸಂಸದೆಗೆ ಒಂದು ರೀತಿಯ ಚಾಳಿಯಾಗಿ ಬಿಟ್ಟಿದೆ.
ರಾಜ್ಯ ಸರ್ಕಾರದ ಕ್ಯಾಬಿನೆಟ್ ನಲ್ಲಿರುವುದು ಕಳ್ಳರ ತಂಡ ಎಂದು ಅಸಾಂವಿಧಾನಿಕ ಪದ ಬಳಕೆ ಮಾಡಿರುವ ಸಂಸದೆಯ ಹೇಳಿಕೆ ಅವರ ರಾಜಕೀಯ ಅಪ್ರಬುದ್ಧತೆಗೆ ಕನ್ನಡಿ ಹಿಡಿದಂತಿದೆ. ರಾಜ್ಯ ಸರ್ಕಾರದ ಕ್ಯಾಬಿನೆಟ್ ಕಳ್ಳರ ತಂಡವೆಂದಾದರೆ, ಕೇಂದ್ರ ಸರ್ಕಾರದ ಕ್ಯಾಬಿನಟನ್ನು ಏನೆಂದು ಕರೆಯೋಣ?
ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದ ಬಿ.ಜೆ.ಪಿ ಸರ್ಕಾರವನ್ನು ಜನರೇ ಕಿತ್ತೆಸೆದಿದ್ದು, ಇದೀಗ ಅಧಿಕಾರ ವಿಲ್ಲದೆ ಹತಾಶರಾಗಿ ನೀರಿನಿಂದ ಹೊರಗೆ ತೆಗೆದ ಮೀನಿನಂತೆ ಚಡಪಡಿಸುತ್ತಿರುವುದೇ ಇವರ ಅಧಿಕಾರ ದಾಹಕ್ಕೆ ಸಾಕ್ಷಿ. ರಾಜ್ಯದಲ್ಲಿ ಸಂಪೂರ್ಣವಾಗಿ ನೆಲಕಚ್ಚಿ ಹೋಗಿರುವ ಬಿ.ಜೆ.ಪಿ.ಗೆ ಈಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸುಳ್ಳು ಕಥೆಗಳ ಸೃಷ್ಟಿ ಮತ್ತು ಅಪಪ್ರಚಾರ ಒಂದೇ ಬಂಡವಾಳ ಎಂಬಂತೆ ಭಾಸವಾಗುತ್ತಿದೆ.
ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು 25 ಸಂಸದರು ಬರಗಾಲದ ಬಗ್ಗೆಯಾಗಲೀ, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾಗಿರುವ ಅನುದಾನದ ಬಗ್ಗೆಯಾಗಲೀ ಬಾಯಿ ತೆರೆದು ಪ್ರಧಾನಿಯವರ ಮುಂದೆ ಮಾತನಾಡುವ ಧೈರ್ಯ ಇಲ್ಲದವರಿಗೆ ರಾಜ್ಯದಲ್ಲಿ ಯಶಸ್ವಿಯಾಗಿ ಜನಪರ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಟೀಕಿಸುವ ಯಾವ ನೈತಿಕತೆ ಇದೆ? ಒಟ್ಟಾರೆಯಾಗಿ ಹೇಳುದಾದರೆ ಕೈಗೆಟುಕದ ದ್ರಾಕ್ಷಿ ಹಣ್ಣು ಹುಳಿ" ಎಂದ ನರಿಯಂತಾಗಿದೆ ಬಿ.ಜೆ.ಪಿ.ಗರ ಪಾಡು” ಎಂದು ಸೊರಕೆ ಟೀಕಿಸಿದ್ದಾರೆ.