ಬೆಳ್ತಂಗಡಿ, ಡಿ 02 (DaijiworldNews/AA): ನೆರಿಯ ಪೋಸ್ಟ್ ಆಫೀಸ್ ಬಳಿ ಕಳೆದ ನ. 27ರ ರಾತ್ರಿ ಕಾಡಾನೆಯೊಂದು ಆಲ್ಟೋ ಕಾರಿನ ಮೇಲೆ ದಾಳಿ ನಡೆಸಿ ಇಬ್ಬರನ್ನು ಗಾಯಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಗಾಯಾಳುಗಳಿಗೆ ತಲಾ 60 ಸಾವಿರ ರೂ. ಹಾಗೂ ವಾಹನ ಜಖಂಗೊಂಡಿರುವುದರಿಂದ 20 ಸಾವಿರ ರೂ. ಪರಿಹಾರ ಅರಣ್ಯ ಇಲಾಖೆಯಿಂದ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಮೋಹನ್ ಕುಮಾರ್ ತಿಳಿಸಿದ್ದಾರೆ
ಈ ಬಗ್ಗೆ ಮಾಹಿತಿ ನೀಡಿದ ಅವರು, ಘಟನೆಯಲ್ಲಿ ಗಾಯಗೊಂಡವರ ಅರ್ಜಿ ಪಡೆದು ಪರಿಹಾರಕ್ಕಾಗಿ ಅರಣ್ಯ ಇಲಾಖೆ ಆನ್ಲೈನ್ ನೋಂದಣಿ ಮಾಡಿದೆ. ಇನ್ನು ಕಾರಿನ ಮೇಲೆ ಆನೆ ದಾಳಿ ನಡೆಸಿದ ಘಟನೆಯ ಬಳಿಕ ಆನೆಯು ಮಿಯಾರು ಅರಣ್ಯವಾಗಿ ಅರಸಿನಮಕ್ಕಿ, ಶಿಶಿಲದಿಂದ ಶಿರಾಡಿ ಘಾಟಿ ಅರಣ್ಯ ಪ್ರದೇಶದತ್ತ ಸಂಚರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಬೆಳ್ತಂಗಡಿಯ ನೆರಿಯ, ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ, ಮುಂಡಾಜೆ, ಕಲ್ಮಂಜ, ಮಿತ್ತಬಾಗಿಲು, ಮಲವಂತಿಗೆ, ಕಡಿರುದ್ಯಾವರ, ಚಿಬಿದ್ರೆ, ಶಿಶಿಲ, ಶಿಬಾಜೆ, ಹತ್ಯಡ್ಕ ಹೀಗೆ ಮೊದಲಾದ ಗ್ರಮಗಳಲ್ಲಿ ಕಾಡಾನೆಗಳು ಆಗಾಗ ದಾಳಿ ನಡೆಸಿ, ಕೃಷಿ ಹಾನಿ ಮಾಡುತ್ತಿದ್ದವು. ಆದರೆ ಇದೀಗ ಜನರ ಮೇಲೆ, ವಾಹನಗಳ ಮೇಲೆ ಕೂಡ ದಾಳಿ ನಡೆಸುತ್ತಿದ್ದು ಸ್ಥಳೀಯರು ಆತಂಕದಲ್ಲಿದ್ದಾರೆ.