ಮಂಗಳೂರು, ಡಿ 01 (DaijiworldNews/MR): ಬದಲಾದ ವಾತಾವರಣ ಹಾಗೂ ಹವಾಮಾನ ವೈಪರೀತ್ಯದಿಂದ ಮಂಗಳೂರಿನ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವೈರಲ್ ಜ್ವರದ ಪ್ರಮಾಣ ಹೆಚ್ಚಳವಾಗುತ್ತಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ಕಳೆದ ಕೆಲವು ದಿನಗಳಿಂದ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಬೆಳಗ್ಗಿನ ಜಾವ ತುಸು ಚಳಿ ಬಳಿಕ ಸೆಕೆ, ಉರಿ ಬಿಸಿಲು ಕೆಲವೆಡೆ ಸಂಜೆ- ರಾತ್ರಿ ಸಾಧಾರಣ ಮಳೆಯಾಗಿದೆ. ಈ ರೀತಿಯ ವಾತಾವರಣವು ವೈರಲ್ ಜ್ವರ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೆಂದು ಗುರುತಿಸಲಾಗಿದ್ದು, ಇದು ನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಚಿಕಿತ್ಸಾಲಯಗಳಿಗೆ ಭೇಟಿ ನೀಡುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.
ಸಾಮಾನ್ಯ ಜನರಲ್ಲಿ ಶೀತ, ಜ್ವರ, ತಲೆನೋವು, ಕೀಲು ನೋವಿನಂತಹ ರೋಗಲಕ್ಷಣಗಳು ಕಂಡುಬರುತ್ತಿವೆ. ಅಂತಹ ರೋಗಿಗಳನ್ನು ನಿಭಾಯಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಿದ್ಧವಾಗಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.
ನಗರ ಪ್ರದೇಶಗಳು ಸಾಂಕ್ರಾಮಿಕ ರೋಗಗಳ ಹರಡುವಿಕೆಯಲ್ಲಿ ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿವೆ. ಉದ್ಯೋಗ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಗರಕ್ಕೆ ಬರುವ ಜನರ ಸಂಖ್ಯೆ ಹೆಚ್ಚುತ್ತಿದ್ದು, ಅವರಲ್ಲಿ ಕೆಲವರು ಈಗಾಗಲೇ ಅನಾರೋಗ್ಯದ ಲಕ್ಷಣಗಳು ಕಂಡುಬರುತ್ತಿವೆ. ಡೆಂಗ್ಯೂ ಅಂಕಿಅಂಶದ ಪ್ರಕಾರ, ಜಿಲ್ಲೆಯಲ್ಲಿ 60% ಪ್ರಕರಣಗಳು ಮಂಗಳೂರು ನಗರ ಭಾಗದಲ್ಲೇ ವರದಿಯಾಗಿವೆ ಎನ್ನಲಾಗಿದೆ.
ವೈರಲ್ ಜ್ವರದ ಮುನ್ನೆಚ್ಚರಿಕೆ
ಕೆಮ್ಮು, ಶೀತ, ತಲೆನೋವು ಸೇರಿದಂತೆ ವೈರಲ್ ಜ್ವರದ ಲಕ್ಷಣಗಳಾಗಿದ್ದು, ಈ ಜ್ವರದಿಂದ ರಕ್ಷಿಸಿಕೊಳ್ಳಲು ಸೋಪಿನಿಂದ ಕೈಗಳನ್ನು ನಿರಂತರವಾಗಿ ತೊಳೆಯುವುದು, ಜನಜಂಗುಳಿಯ ನಡುವೆ ಇರುವಾಗ ಮಾಸ್ಕ್ ಧರಿಸುವುದು, ದೇಹ ಶುಷ್ಕವಾಗಲು ಆಸ್ಪದ ನೀಡದಂತೆ ಸಾಕಷ್ಟು ನೀರು ಕುಡಿಯುವುದು ಅಗತ್ಯವಾಗಿದೆ.