ಕಾಸರಗೋಡು, ಡಿ 01 (DaijiworldNews/MS): ಕಾಸರಗೋಡು ಸರಕಾರಿ ವೈದ್ಯಕೀಯ ಕಾಲೇಜಿಗೆ ಉಕ್ಕಿನಡ್ಕದಲ್ಲಿ ಶಿಲಾನ್ಯಾಸಗೈದು ಹತ್ತು ವರ್ಷ ಕಳೆದರೂ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯರಂಭಿಸದ ಕಾಲೇಜು ಚಟುವಟಿಕೆಯ ಬಗ್ಗೆ ರಾಜ್ಯ ಸರಕಾರದ ನಿರ್ಲಕ್ಷ್ಯತನ ಖಂಡಿಸಿ ಯುಡಿಎಫ್ ವೈದ್ಯಕೀಯ ಕಾಲೇಜು ಸಂರಕ್ಷಣಾ ಸಮಿತಿ ವತಿಯಿಂದ "ನವ ಕೇರಳ ಭಿಕ್ಷಾಟನಾ ಸಭೆ" ಆಯೋಜಿಸಿ ಭಿಕ್ಷೆ ಎತ್ತುವ ಪ್ರತಿಭಟನೆಯ ಮೂಲಕ ವಿಶಿಷ್ಟವಾಗಿ ಗಮನ ಸೆಳೆಯಲಾಯಿತು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ “ರಾಜ್ಯದಾದ್ಯಂತ ಎಲ್ಲಾ ರಂಗದಲ್ಲೂ ವಿಫಲತೆಯನ್ನು ಕಾಣುತ್ತಾ ಜನ ಸಮಾನ್ಯರೆಡೆಗೆ ಮಂಕು ಬೂದಿಯನ್ನೆರಚುವ ರಾಜ್ಯ ಸರಕಾರ ಜಿಲ್ಲೆಯ ಬಹು ನಿರೀಕ್ಷಿತ ಬೇಡಿಕೆಯ ವೈದ್ಯಕೀಯ ಕಾಲೇಜನ್ನು ನಿರ್ಲಕ್ಷಿಸಿ ಇದೇ ಜಿಲ್ಲೆಯಿಂದ "ನವ ಕೇರಳ ಸದಸ್ಸ್" ಎಂಬುದಾಗಿ ಆಡಂಭರ ಪ್ರದರ್ಶಿಸಿಸಿ ಮುಂದುವರಿಯುತ್ತಿದೆ. ಜನತೆಯ ಬೇಡಿಕೆಗಿಂತಲೂ ಸರಕಾರದ ಧೋರಣೆಯನ್ನೇ ನೇರವಾಗಿ ಜನತೆಯ ಮೇರೆ ಹೇರುವಂತಹ ಹೇಯ ಕ್ರಮ ಖಂಡನೀಯವಾಗಿದ್ದು ಯುಡಿಎಫ್ ಸರಕಾರ ಆರಂಭಿಸಿದ ವೈದ್ಯಕೀಯ ಕಾಲೇಜಿನ ಬಳಿಕದ ಕಾರ್ಯಗಳನ್ನು ನಿರ್ಲಕ್ಷ್ಯವಹಿಸಿದ ಎಡರಂಗ ಸರಕಾರದ ವಿರುದ್ಧ ಪ್ರತಿಭಟಿಸುವ ಸದಾ ಸನ್ನದ್ಧರಾಗಿರುವುದಾಗಿ ತಿಳಿಸಿದರು. ಯುಡಿಎಫ್ ವೈದ್ಯಕೀಯ ಕಾಲೇಜು ಸಂರಕ್ಷಣಾ ಸಮಿತಿ ಅಧ್ಯಕ್ಷ ಮಾಹಿನ್ ಕೇಳೋಟ್ ಅಧ್ಯಕ್ಷತೆವಹಿಸಿದ್ದರು.
ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್, ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು,ಮಾಜಿ ಸಚಿವ ಸಿ ಟಿ ಆಹಮ್ಮದಾಲಿ, ಹೋರಾಟ ಸಮಿತಿ ಸಂಚಾಲಕ ಸೋಮಶೇಖರ್ ಜೆ.ಎಸ್. ಮೊದಲಾದವರು ಮಾತನಾಡಿದರು. ವಿವಿಧ ಜನ ಪ್ರತಿನಿಧಿಗಳು,ಕಾಂಗ್ರೆಸ್ ಮಂಡಲ,ಬ್ಲೋಕ್ ಮಟ್ಟದ ನೇತಾರರು,ಮುಸ್ಲಿಂ ಲೀಗ್,ಯೂತ್ ಲೀಗ್, ಮಹಿಳಾ ಲೀಗ್,ಯೂತ್ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತ ರಿದ್ದರು.