ಉಡುಪಿ, ನ 30 (DaijiworldNews/HR): ಕರ್ನಾಟಕದಲ್ಲಿ ನಾವು ಕಳ್ಳರ ಕೈಗೆ ಬೀಗದ ಕೈಕೊಟ್ಟಿದ್ದೇವೆ. ಹಾಗಾಗಿ ಕಳ್ಳರ ತಂಡ ಕ್ಯಾಬಿನೆಟಿನಲ್ಲಿ ಕೂತಿದೆ ಎಂದು ಕೇಂದ್ರ ಕೃಷಿ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಡಿಕೆಶಿ ಸಿಬಿಐ ತನಿಖೆ ಹಿಂಪಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಶೋಭಾ, ರಾಜ್ಯದಲ್ಲಿ ಕಳ್ಳರ ತಂಡ ಕ್ಯಾಬಿನೆಟಿನಲ್ಲಿ ಕೂತಿದೆ. ಅವರೇ ಕೇಸು ವಾಪಸ್ ತಗೊಳ್ತಾರೆ, ಅವರೇ ಜವಾಬ್ದಾರಿ ಹಂಚಿಕೊಳ್ಳುತ್ತಾರೆ. ಅವರೇ ದುಡ್ಡು ತಿಂತಾರೆ ಅವರೇ ಸಂಗ್ರಹ ಮಾಡುತ್ತಾರೆ. ಬೇರೆ ರಾಜ್ಯಗಳಿಗೆ ಚುನಾವಣೆ ನಡೆಸಲು ಹಣ ಹಂಚುತ್ತಾರೆ. ಇಷ್ಟೊಂದು ಮುಂದುವರಿದ ಸಿಬಿಐ ಕೇಸನ್ನ ಕೈ ಬಿಡುವುದು ಎಷ್ಟು ಸರಿ. ನಿರ್ಣಾಯಕ ಹಂತದಲ್ಲಿ ಕೇಸು ವಾಪಸು ತೆಗೆದುಕೊಳ್ಳುವುದು ಭ್ರಷ್ಟಾಚಾರಿಗಳ ರಕ್ಷಣೆ ಎಂದರು.
ಇನ್ನು ಭ್ರಷ್ಟಾಚಾರಿಗಳ ರಕ್ಷಣೆ ಕಾಂಗ್ರೆಸ್ ನ ನೀತಿ. ಸಿಬಿಐ ಇದಕ್ಕೆ ಅವಕಾಶ ಕೊಡಲ್ಲ ಅನ್ನೋ ವಿಶ್ವಾಸ ಇದೆ. ಭ್ರಷ್ಟರಿಗೆ ಖಂಡಿತ ಶಿಕ್ಷೆಯಾಗುತ್ತೆ ಎಂದಿದ್ದಾರೆ.
ವಿವಿಧ ರಾಜ್ಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾತನಾಡಿದ ಅವರು, ಚುನಾವಣೆ ಫಲಿತಾಂಶದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ. ಸಿದ್ದರಾಮಯ್ಯ ಮಾದರಿಯಲ್ಲೇ ದೇಶಾದ್ಯಂತ ಹಣ ಹಂಚಿ ಕಾಂಗ್ರೆಸ್ ಚುನಾವಣೆ ಮಾಡಿದೆ. ಕೆಲವು ರಾಜ್ಯದ ಜನ ನಮ್ಮ ಬೆಂಬಲಕ್ಕೆ ನಿಲ್ಲಬಹುದು. ಸುಳ್ಳು ಗ್ಯಾರಂಟಿ, ಹಣ ಹೆಂಡ ಹಂಚಿದ್ದಾರೆ. ನಮ್ಮ ರಾಜ್ಯದಲ್ಲಿ ಗ್ಯಾರಂಟಿಗಳು ಫೇಲ್ಯೂರ್ ಆಗಿದೆ. ಆದರೆ ಜನರಿಗೆ ಅದು ಗೊತ್ತಾಗುತ್ತಿಲ್ಲ ಎಂದರು.
ನಮ್ಮ ಗಮನ ಇರುವುದು ಮುಂದಿನ ಲೋಕಸಭಾ ಚುನಾವಣೆಗೆ. ಮತ್ತೊಮ್ಮೆ ಮೋದಿ ಇದು ನಮ್ಮ ಸಂದೇಶ. 2024ರಲ್ಲಿ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ಬರಬೇಕು ಇದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.