ಕುಂದಾಪುರ, ನ 30 (DaijiworldNews/HR): ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಗುಮಾಸ್ತರೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಉಡುಪಿ ಲೋಕಾಯುಕ್ತರು ನ.29 ಬುಧವಾರ ಸಂಜೆ ದಾಳಿ ನಡೆಸಿದ್ದಾರೆ.
ಕುಂದಾಪುರ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತರಾಗಿದ್ದ ಬಿ ಮಂಜುನಾಥ ಪೂಜಾರಿ 20 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಹಲವು ದಿನಗಳ ಹಿಂದೆ ಆಲೂರಿನಿಂದ ಮಲಬಾರ್ ಕಬ್ಬಿಣದ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಈಚರ್ ಲಾರಿಯನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದರು. ವಶಪಡಿಸಿಕೊಂಡ ವಾಹನವನ್ನು ಬಿಡಿಸಲು ಮಂಜುನಾಥ ಪೂಜಾರಿ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಇನ್ನು ಲಾರಿಗೆ ಸಂಬಂಧಿಸಿದವರು ಲೋಕಾಯುಕ್ತರಿಗೆ ವಿಷಯ ತಿಳಿಸಿದ್ದು, ಬುಧವಾರ ಸಂಜೆ ಲಂಚ ವಿನಿಮಯದ ವೇಳೆ ಡಿಸಿಎಫ್ ಕಚೇರಿ ಮೇಲೆ ದಾಳಿ ನಡೆದಿದೆ.
ಉಡುಪಿ ಲೋಕಾಯುಕ್ತ ಇನ್ಸ್ ಪೆಕ್ಟರ್ ರಫೀಕ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಸದ್ಯ ತನಿಖೆ ನಡೆಯುತ್ತಿದೆ.