ಬೆಳ್ಳೂರು, ನ 29 (DaijiworldNews/AA): 'ಮೇಕ್ ಸಮ್ ವನ್ ಸ್ಮೈಲ್-ಹೆಲ್ಪಿಂಗ್ ಹ್ಯಾಂಡ್' ಎಂಬ ಖಾಸಗಿ ಸಂಘಟನೆಯ ನೇತೃತ್ವದಲ್ಲಿ ಬೆಳ್ಳೂರು ಗ್ರಾ.ಪಂ ನೆಟ್ಟಣಿಗೆ ಸಮೀಪದ ಕಕ್ಕೆಬೆಟ್ಟು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯ ನವೀಕೃತ ಕಟ್ಟಡವನ್ನು ಉದ್ಘಾಟನೆ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ 'ಮೇಕ್ ಸಮ್ ವನ್ ಸ್ಮೈಲ್-ಹೆಲ್ಪಿಂಗ್ ಹ್ಯಾಂಡ್' ಸಂಘಟನೆಯ ಸದಸ್ಯ ಪ್ರಮೋದ್ ಕುಮಾರ್ ನವೀಕೃತ ಕಟ್ಟಡವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ನವೀನ ಕುಮಾರ್ ಆಜಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗ್ರಾ.ಪಂ ಅಧ್ಯಕ್ಷ ಶ್ರೀಧರ ಎಂ., ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಕಡಂಬಳಿತ್ತಾಯ, ಸಾಹಿತಿ, ಕೊಡುಗೈ ದಾನಿ ಪ್ರಭಾಕರ ಕಲ್ಲೂರಾಯ ಬನದಗದ್ದೆ ಶುಭಹಾರೈಸಿದರು. ಈ ವೇಳೆ ಶಾಲಾ ವ್ಯವಸ್ಥಾಪಕ ನವೀನ ಕುಮಾರ್ ಮತ್ತು ಊರಿನ ಹಿರಿಯರಾದ ಗೋವಿಂದ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಶಿಕ್ಷಕಿ ವೀಣಾ ಕುಮಾರಿ ಸ್ವಾಗತಿಸಿ, ಶಿಕ್ಷಕ ವಿಠಲ ಎ. ವಂದಿಸಿದರು. ಶಿಕ್ಷಕಿ ನಳಿನಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ 'ಮೇಕ್ ಸಮ್ ವನ್ ಸ್ಮೈಲ್-ಹೆಲ್ಪಿಂಗ್ ಹ್ಯಾಂಡ್' ಸಂಘಟನೆಯ ಸದಸ್ಯರು ಮಕ್ಕಳೊಡನೆ ವೈವಿದ್ಯಮಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
'ಮೇಕ್ ಸಮ್ ವನ್ ಸ್ಮೈಲ್-ಹೆಲ್ಪಿಂಗ್ ಹ್ಯಾಂಡ್' ಸಂಘಟನೆಯು ಶಾಲಾ ಮಾಡಿಗೆ ಕಬ್ಬಿಣದ ಪಟ್ಟಿ ಅಳವಡಿಸಿಕೊಟ್ಟಿದೆ. ಜೊತೆಗೆ ಶಾಲಾ ಕಟ್ಟಡದ ಹೊರ ಗೋಡೆಯಲ್ಲಿ ಯಕ್ಷಗಾನ, ಕಥಕ್ಕಳಿ, ಮೋಹಿನಿಯಾಟ್ಟಂ ಹೀಗೆ ಮೊದಲಾದ ಕಲಾ ಪ್ರಕಾರಗಳು, ಕಂಬಳ, ಹುಲಿವೇಷ ಕಳರಿಪ್ಪಯಟ್ಟ್, ಅಂಬಾರಿ ಮೆರವಣಿಗೆ, ದೋಣಿ ಓಟ ಹೀಗೆ ಮತ್ತಿತರ ರಂಗು ರಂಗಿನ ಆಕರ್ಷಕ ಭಿತ್ತಿಚಿತ್ರಗಳನ್ನು ರಚನೆ ಮಾಡಿದ್ದಾರೆ.