ಕೋಟ, ನ 29 (DaijiworldNews/MS): ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ (ನಿ)ಹಾಗೂ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ (ನಿ), ಬೆಂಗಳೂರು ಸಂಯುಕ್ತ ಆಶ್ರಯದಲ್ಲಿ ಡಿ.2ರಂದು ಬೆಳಗ್ಗೆ 9.30ರಿಂದ ಹಂಗಾರಕಟ್ಟೆ ‘ಚೇತನಾ ಹೈಸ್ಕೂಲ್ ಕ್ರೀಡಾಂಗಣ’ದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಕ್ರೀಡೋತ್ಸವ “ಸೌಹಾರ್ದ ಸಂಭ್ರಮ-2023" ಎನ್ನುವಹೆಸರಲ್ಲಿ ಜರಗಲಿದೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಸಹಕಾರಿ ಬೆಂಗಳೂರು ಇದರ ನಿರ್ದೇಶಕ ಮಂಜುನಾಥ ಎಸ್.ಕೆ. ಸಾಲಿಗ್ರಾಮದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯ 150ಸೌಹಾರ್ದ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬಂದಿ ಸೇರಿದಂತೆ ಒಟ್ಟು ಎರಡು ಸಾವಿರ ಮಂದಿಸಹಕಾರಿಗಳು ಹಾಗೂ ಪಿಗ್ಮಿ ಸಂಗ್ರಾಹಕರು ಇತ್ಯಾದಿ ಸಿಬಂದಿಯೇತರರು ಒಂದು ಸಾವಿರ ಮಂದಿ ಸೇರಿದಂತೆ ಒಟ್ಟು ಮೂರು ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕಾಪು,ಉಡುಪಿ, ಬ್ರಹ್ಮಾವರ, ಬೈಂದೂರು, ಹೆಬ್ರಿ, ಕಾರ್ಕಳ, ಕುಂದಾಪುರ ತಾಲೂಕುಗಳನ್ನು 7ವಲಯಗಳನ್ನಾಗಿ ರಚಿಸಿ ವಾಲಿಬಾಲ್, ತ್ರೋಬಾಲ್, ರಿಲೇ, ಹಗ್ಗ ಜಗ್ಗಾಟ,100ಹಾಗೂ 200ಮೀ ಓಟ, ಗುಂಡೆಸೆತ, ಉದ್ದ ಜಿಗಿತ, ಸಂಗೀತ ಕುರ್ಚಿ ಸ್ಪರ್ಧೆಗಳನ್ನು ಪುರುಷರು, ಮಹಿಳೆಯರ ವಿಭಾಗದಲ್ಲಿ ನಡೆಸಲಿದ್ದೇವೆ ಎಂದರು.
ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಕ್ರೀಡಾಜ್ಯೋತಿ ಬೆಳಗಲಿದ್ದು, ಉಡುಪಿ ಶಾಸಕ ಯಶಪಾಲ್ ಸುವರ್ಣ ಕ್ರೀಡೋತ್ಸವ ಉದ್ಘಾಟಿಸಲಿದ್ದಾರೆ. ರಾಜ್ಯ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ.
ಅಧ್ಯಕ್ಷತೆ ವಹಿಸಲಿದ್ದಾರೆ.
ಸೌಹಾರ್ದ ಸಹಕಾರಿ ರಾಜ್ಯಾಧ್ಯಕ್ಷ ನಂಜನ ಗೌಡ ಮೊದಲಾದವರು ಉಪಸ್ಥಿತರಿರುವರು. ಅಪರಾಹ್ನ 12.30ಕ್ಕೆ ಕ್ರೀಡಾಕೂಟ ಸಮಿತಿ ಸಂಚಾಲಕ ಅಶೋಕ್ ಪ್ರಭು
ಸಾಹೇಬ್ರಕಟ್ಟೆ ಸಂಚಾಲಕತ್ವದಲ್ಲಿ ಸಮ್ಮಾನ ಸಮಾರಂಭ, ಅಪರಾಹ್ನ ೪ಗಂಟೆಗೆ ಜಿಲ್ಲಾ ಉಪಾಧ್ಯಕ್ಷ ಮಧುಸೂದನ್ ನಾಯ್ಕ್ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ, ಅಪರಾಹ್ನ
೫ಗಂಟೆಗೆ ಸೌಹಾರ್ದ ಸಹಕಾರಿ ಜಿಲ್ಲಾಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರಗಲಿದೆ ಎಂದರು.
ಜಿಲ್ಲಾ ಸೌಹಾರ್ದ ವ್ಯವಸ್ಥೆ ಮಾದರಿ :-ಜಿಲ್ಲೆಯ ಸೌಹಾರ್ದ ವ್ಯವಸ್ಥೆ ರಾಜ್ಯಕ್ಕೆ ಮಾದರಿಯಾಗಿದ್ದು, ಇಂತಹ ಕಾರ್ಯಕ್ರಮ ಕೂಡ ರಾಜ್ಯದಲ್ಲೇ ಅಪರೂಪವಾಗಿ ಮೂರನೇ ಬಾರಿ ಆಯೋಜನೆಯಾಗುತ್ತಿದೆ. ಕೇಂದ್ರ ಸಹಕಾರಿ ನೀತಿಯಲ್ಲಿ ಬಹಳಷ್ಟು ವಿಚಾರಗಳನ್ನು ಜಿಲ್ಲೆಯ ಸೌಹಾರ್ದ ಸಂಸ್ಥೆಗಳು ಈಗಾಗಲೇ ಅಳವಡಿಸಿಕೊಂಡು ಸುವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಂಜುನಾಥ ಎಸ್.ಕೆ. ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರೀಡಾ ಸಂಚಾಲಕ ಅಶೋಕ್ ಪ್ರಭು ಸಾಹೇಬ್ರಟ್ಟೆ , ಸೌಹಾರ್ದ ಸಹಕಾರಿ ಜಿಲ್ಲಾಧ್ಯಕ್ಷ ಅಂಪಾರು ಜಗನ್ನಾಥ ಶೆಟ್ಟಿ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಸಿ.ಇ.ಒ. ಲೋಹಿತ್, ಅಭಿವೃಧಿ ಅಧಿಕಾರಿ ವಿಜಯ ಮೊದಲಾದವರು ಉಪಸ್ಥಿತರಿದ್ದರು.