ಕಾಸರಗೋಡು, ನ 29 (DaijiworldNews/AA): ನಾಪತ್ತೆಯಾಗಿದ್ದ ಕಾಸರಗೋಡಿನ ನಾಲ್ವರು ಅಪ್ರಾಪ್ತ ವಯಸ್ಸಿನ ಬಾಲಕರು ಉಡುಪಿಯಲ್ಲಿ ಪತ್ತೆಯಾಗಿದ್ದಾರೆ.
ಈ ನಾಲ್ವರು ಬಾಲಕರ ಪೈಕಿ ಮೂವರು ಮಕ್ಕಳು ನ. 27 ರಂದು ಸಂಜೆ ಶಾಲೆಯಿಂದ ಮನೆಗೆ ಬಂದಿದ್ದು, ಬಳಿಕ ಆಟ ಆಡಲೆಂದು ಮನೆಯಿಂದ ಹೊರಗೆ ತೆರಳಿದ್ದರು. ಈ ಮೂವರು ಬಾಲಕರೊಂದಿಗೆ ಇದೇ ಪ್ರದೇಶದ ಇನ್ನೋರ್ವ ಬಾಲಕನೂ ತೆರಳಿದ್ದು, ನಾಲ್ವರು ತಡವಾದರೂ ಇನ್ನೂ ಮನೆಗೆ ಬಂದಿರಲಿಲ್ಲ. ಎಲ್ಲರೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾದ್ದರಿಂದ ಆತಂಕಗೊಂಡ ಬಾಲಕರ ಪೋಷಕರು ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.
ಬಳಿಕ ಕಾಸರಗೋಡಿನ ಪೊಲೀಸರು ಮಂಗಳೂರು ಸೇರಿ ಕರ್ನಾಟಕದ ವಿವಿಧ ಠಾಣೆಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇನ್ನು ನಾಪತ್ತೆಯಾದ ಓರ್ವ ಬಾಲಕನ ಬಳಿ ಇದ್ದ ಮೊಬೈಲ್ ಪೋನ್ ನ ಲೊಕೇಶನ್ ಟ್ರೇಸ್ ಮಾಡಿದಾಗ ಅವರು ಉಡುಪಿಯಲ್ಲಿ ಇರುವ ಬಗ್ಗೆ ತಿಳಿದುಬಂದಿದೆ. ಕೂಡಲೇ ಕಾಸರಗೋಡಿನ ಪೊಲೀಸರು ಈ ಬಗ್ಗೆ ಉಡುಪಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಉಡುಪಿ ಪೊಲೀಸರು ನಾಲ್ವರು ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಕಾಸರಗೋಡಿನ ಪೊಲೀಸರು ಹಾಗೂ ಮಕ್ಕಳ ಹೆತ್ತವರು ನ. 27 ರ ರಾತ್ರಿಯೇ ಉಡುಪಿಗೆ ತೆರಳಿ ಅವರನ್ನು ಕಾಸರಗೋಡು ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಈ ನಾಲ್ವರು ಬಾಲಕರಿಗೆ ಕೌನ್ಸೆಲಿಂಗ್ ನೀಡಿ ಪೋಷಕರೊಂದಿಗೆ ಕಳುಹಿಸಿಕೊಡಲಾಯಿತು. ಇನ್ನು ತಾವೆಲ್ಲರೂ ಗೋವಾಕ್ಕೆ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಮನೆ ಬಿಟ್ಟು ಬಂದಿದ್ದೆವು ಎಂದು ಮಕ್ಕಳು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.