ಬೆಳ್ತಂಗಡಿ, ನ 28 (DaijiworldNews/SK): ಹೊಟೇಲ್ ನಲ್ಲಿ ದುಡಿದ ವೇತನ ಕೇಳಿದ್ದಕ್ಕೆ ಮಾಲೀಕ ಕಾರ್ಮಿಕನಿಗೆ ಚಪ್ಪಲಿಯಿಂದ ಹೊಡೆದು ಹಲ್ಲೆಗೈದಿರುವ ಆರೋಪ ಕೇಳಿಬಂದಿದೆ.
ಧರ್ಮಸ್ಥಳ ಸಮೀಪದ ಕಲ್ಲೇರಿಯಲ್ಲಿ ಈ ಘಟನೆ ನಡೆದಿದ್ದು, ಅಮೃತ ರೆಸ್ಟೋರೆಂಟ್ ಮಾಲೀಕ ಎ ಜೆ ಅಂತೋನಿ ದೌರ್ಜನ್ಯವೆಸಗಿದ ವ್ಯಕ್ತಿ ಎಂದು ಆರೋಪಿಸಲಾಗಿದೆ.
ಬೆಂಗಳೂರಿನ ಗೊರಗುಂಟೆಪಾಳ್ಯ ಮೂಲದ ವ್ಯಕ್ತಿಯೊಬ್ಬರು ಅಮೃತ ರೆಸ್ಟೋರೆಂಟ್ ನಲ್ಲಿ ಹಲವಾರು ತಿಂಗಳಿಂದ ಕೆಲಸವನ್ನು ಮಾಡುತ್ತಿದ್ದು, ತನ್ನ ವೇತನವನ್ನು ಕೇಳಿದಕ್ಕೆ ರೊಚ್ಚಿಗೆದ್ದ ರೆಸ್ಟೋರೆಂಟ್ ಮಾಲೀಕ ಚಪ್ಪಲ್ಲಿಯಿಂದ ಈ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಇದರೊಂದಿಗೆ, ಕಾರ್ಮಿಕನ ಕೈಯ್ಯಲ್ಲಿದ್ದ ಸುಮಾರು ಮೂರು ಸಾವಿರ ರೂಪಾಯಿ ಹಣವನ್ನು ಕಿತ್ತುಕ್ಕೊಂಡು ಬೀದಿಗೆ ತಳ್ಳಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.
ಈ ಘಟನೆಯನ್ನು ಮಾಧ್ಯಮವೊಂದರ ವರದಿಗಾರರು ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಇದನ್ನು ಗಮನಿಸಿದ ರೆಸ್ಟೋರೆಂಟ್ ಮಾಲೀಕ ಆ ವರದಿಗಾರನ ಮೇಲೆಯೂ ದರ್ಪವನ್ನು ತೋರಿ ಅವಾಜ್ ಹಾಕಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವರದಿಗಾರ ಮತ್ತು ಸಂತ್ರಸ್ತ ವ್ಯಕ್ತಿಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದು, ಧರ್ಮಸ್ಥಳ ಅಲ್ಲಿನ ಪೊಲೀಸರು ಯಾವುದೇ ಸಹಕಾರ ನೀಡದೆ ಮತ್ತು ದೂರನ್ನು ದಾಖಲಿಸಿಕೊಳ್ಳದೆ ಕರ್ತವ್ಯ ಲೋಪವೆಸಗುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.