ಮಂಗಳೂರು, ನ 28 (DaijiworldNews/MS): ನಗರದ ವಾಮಂಜೂರು ಸಮೀಪದ ಕೆತ್ತಿಕಲ್ನಲ್ಲಿ ಆ ಊರಿಗೆ ಹೆಸರು ಬರಲು ಕಾರಣ ಎನ್ನಲಾದ ಕಲ್ಲೊಂದು ಪತ್ತೆಯಾಗಿದೆ.
ಸೋಮವಾರದಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಹೆದ್ದಾರಿ ವಿಸ್ತರಣೆ ಕಾಮಗಾರಿಗಾಗಿ ಗಿಡಗಂಟಿಗಳ ತೆರವುಗೊಳಿಸುವಾಗ ಈ ಕಲ್ಲು ಪತ್ತೆಯಾಗಿದೆ.
ಕೆತ್ತಿಕಲ್ ಎಂಬ ಹೆಸರಿಗೂ ಈ ಕೆತ್ತಿರುವ ಕಲ್ಲೇ ಕಾರಣ ಎನ್ನುತ್ತಾರೆ ಸ್ಥಳೀಯರು.ಮೇಲ್ನೋಟಕ್ಕೆ ಒಂದು ಪೀಠದ ಮೇಲೆ ಇದ್ದು ಶಿವಲಿಂಗದಂತೆ ಕಂಡುಬಂದರೂ ಕಪ್ಪುಕಲ್ಲಿನಲ್ಲಿ ಮಾಡಿದ್ದಲ್ಲ, ಬದಲಿಗೆ ಕೆಂಪುಕಲ್ಲಿನಲ್ಲಿ ವೃತ್ತಾಕಾರದಲ್ಲಿ ಕೆತ್ತಲಾಗಿದೆ. ಕಲ್ಲಿನಲ್ಲಿ ಯಾವುದೇ ಶಾಸನ ಬರೆದಿರುವುದು ಕಂಡು ಬಂದಿಲ್ಲ. " ಬಹಳ ಹಿಂದೆ ಎತ್ತಿನಗಾಡಿಯಲ್ಲಿ ಪಯಣಿಸು್ ಕಾಲದಲ್ಲಿ ಜನರು ಇಲ್ಲಿ ಕುಳಿತು ವಿಶ್ರಾಂತಿ ಪಡೆದು ಮುಂದೆ ಸಾಗುತ್ತಿದ್ದರೆಂದು ನಮ್ಮ ಹಿರಿಯರು ಹೇಳುತ್ತಿದ್ದರು" ಎನ್ನುತ್ತಾರೆ ಸ್ಥಳೀಯರು.
ಕೆತ್ತಿಕಲ್ಗೆ ನೂರಾರು ವರ್ಷಗಳ ಚರಿತ್ರೆ ಇದ್ದು, ಕಲ್ಲನ್ನು ತತ್ಕ್ಷಣ ತೆರವು ಮಾಡದೇ, ಗೌರವಯುತವಾಗಿ ಸ್ಥಳಾಂತರ ಮಾಡಬೇಕು ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಲ್ಲಿ ಸ್ಥಳೀಯರು ಆಗ್ರಹಿಸಿದ್ದು, ಇದಕ್ಕೊಪ್ಪಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಕ್ರೇನ್ ಹಾಗೂ ಹಗ್ಗ ಬಳಸಿಕೊಂಡು ಕಲ್ಲನ್ನು ಸ್ಥಳಾಂತರಿಸುತ್ತೇವೆ, ಯಾವುದೇ ಹಾನಿ ಮಾಡುವುದಿಲ್ಲ ಎಂದು ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.