ಉಡುಪಿ, ನ 26(DaijiworldNews/MS): ನೇಜಾರು ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತರ ಕುಟುಂಬ ಸದಸ್ಯರನ್ನು, ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಇದರ ಉಪಾಧ್ಯಕ್ಷೆಯಾದ ಡಾ.ಆರತಿ ಕೃಷ್ಣ, ನ.26ರ ಇಂದು ಭೇಟಿ ಮಾಡಿ ಸಾಂತ್ವನ ಹೇಳಿದರು.
ನೇಜಾರಿನಲ್ಲಿರುವ ಸಂತ್ರಸ್ಥರಿರುವ ನಿವಾಸದಲ್ಲಿ ಕುಟುಂಬದ ಮುಖ್ಯಸ್ಥ ನೂರ್ ಮೊಹಮ್ಮದ್ ಅವರನ್ನು ಭೇಟಿಯಾಗಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಎಂಎ ಗಫೂರ್, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ವಿಶ್ವಾಸ್ ಅಮೀನ್, ಯು.ಟಿ ಇಫ್ತಿಕರ್ ಅಲಿ ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಆರೋಪಿಯ ವಿರುದ್ಧ ಕಠಿಣ ಶಿಕ್ಷೆ ಮತ್ತು ತ್ವರಿತ ವಿಚಾರಣೆಗೆ ಮತ್ತು ವಕೀಲ ಶಿವಪ್ರಸಾದ್ ಆಳ್ವ ಅವರನ್ನು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸುವಂತೆ ಕುಟುಂಬ ಸದಸ್ಯರು ಡಾ.ಆರತಿ ಕೃಷ್ಣ ಅವರಿಗೆ ಮನವಿ ಸಲ್ಲಿಸಿದರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಡಾ.ಆರತಿ ಕೃಷ್ಣ, ನೂರ್ ಮೊಹಮ್ಮದ್ ಕೂಡ ಎನ್ಆರ್ಐ ಆಗಿದ್ದು, ಅವರು ಸೌದಿ ಅರೇಬಿಯಾದಲ್ಲಿ ಬಹಳ ಸಮಯದಿಂದ ಕೆಲಸ ಮಾಡಿದ್ದಾರೆ. ಎನ್ಆರ್ಐ ಫೋರಂನ ಉಪಾಧ್ಯಕ್ಷರಾಗಿ ರಿಯಾದ್ಗೆ ಭೇಟಿ ನೀಡಿದ ನಂತರ ನನಗೆ ಈ ಘಟನೆ ಬಗ್ಗೆ ತಿಳಿದಿದೆ. ಈ ಘಟನೆಯಿಂದ ಅನೇಕ ಎನ್ಆರ್ಐಗಳು ಆಘಾತಕ್ಕೊಳಗಾಗಿದ್ದಾರೆ. ಭಾರತದಲ್ಲಿ ತಮ್ಮ ಕುಟುಂಬಗಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿದ್ದಾರೆ.ಕುಟುಂಬದವರು ಸಲ್ಲಿಸಿದ ವಿನಂತಿಗಳನ್ನು ನಾನು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ.ಆ ನಿಟ್ಟಿನಲ್ಲಿ ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಾನು ಕೂಡ ಹೋರಾಟ ನಡೆಸುತ್ತೇನೆ ಎಂದು ಹೇಳಿದರು.