ಉಡುಪಿ, ನ 26 ( DaijiworldNews/HR): ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿಗೆ ಉನ್ನತ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ನಿರ್ಧಾರಣೆಗಾಗಿರುವ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ಇವರು 4ರಲ್ಲಿ 3.29ರ ಅಂಕಗಳ ಮೌಲ್ಯಮಾಪನದೊಂದಿಗೆ A+ ಮಾನ್ಯತೆ ನೀಡಿ ಪುರಸ್ಕರಿಸಿದೆ.
ಈ ಪುರಸ್ಕಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಇವರು ಕಾಲೇಜಿನಲ್ಲಿ ಘೋಷಿಸಿ ಈ ಸಾಧನೆಯ ಹಿಂದೆ ಶ್ರಮಿಸಿರುವವರಿಗೆ ಕೃತಜ್ಞತೆ ಸಲ್ಲಿಸಿದರು.
ನವಂಬರ್ 10 ಮತ್ತು 11ರಂದು ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡದ ಚೇರ್ಮನ್ ಡಾ. ಜುಗಲ್ ಕಿಶನ್ ಮಿಶ್ರಾ , ರಾಜ್ಯಶಾಸ್ತ್ರ ವಿಭಾಗ, ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್, ಭುವನೇಶ್ವರ, ಒಡಿಶಾ, ಡಾ. ಡಿ ಕೆ ಶರ್ಮ, ರಸಾಯನಶಾಸ್ತ್ರ ವಿಭಾಗ, ರಾಜಸ್ಥಾನ ವಿಶ್ವವಿದ್ಯಾನಿಲಯ, ಜೈಪುರ ಹಾಗೂ ಡಾ. ಮಿನು ಮದ್ಲಾನಿ, ಪ್ರಾಂಶುಪಾಲರು ಹಿಂದೂಜಾ ಕಾಲೇಜ್ ಆಪ್ ಆಫ್ ಕಾಮರ್ಸ್, ಮುಂಬೈ ಇವರು ಸದಸ್ಯರಾಗಿ ಕಾಲೇಜಿನ ಮೌಲ್ಯಮಾಪನ ಹಾಗೂ ಮಾನ್ಯತಾ ಅಂಕಗಳ ಶಿಫಾರಸು ಮಾಡಿದ್ದರು.
ಇನ್ನು ಕಾಲೇಜಿನ ಪ್ರಾಂಶುಪಾಲ ಡಾ.ವಿನ್ಸೆಂಟ್ ಆಳ್ವ ಇವರು ಮೌಲ್ಯಮಾಪನ ತಂಡದವರಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಸಂಸ್ಥೆಯ ಅಧ್ಯಕ್ಷರು, ಉಡುಪಿ ಧರ್ಮ ಪ್ರಾಂತ್ಯದ ಧರ್ಮಾಧಿಕಾರಿ ಜೆರಾಲ್ಡ್ ಐಸಾಕ್ ಲೋಬೋ, ಕ್ಯಾಥೋಲಿಕ್ ಶಿಕ್ಷಣ ಮಂಡಳಿ ಉಡುಪಿಯ ಕಾರ್ಯದರ್ಶಿ ಫಾದರ್ ವಿನ್ಸೆಂಟ್ ಕ್ರಾಸ್ತಾ, ಜೊತೆ ಕಾರ್ಯದರ್ಶಿ ಹಾಗೂ ಸಂಚಾಲಕರಾದ ಫಾದರ್ ವಲೇರಿಯನ್ ಮೆಂಡೋನ್ಸ ಇವರಿಗೆ ಮಾರ್ಗದರ್ಶನ ಹಾಗೂ ಸಹಕಾರಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ನಿರ್ವಹಣಾ ಸಮಿತಿಯ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪೋಷಕರು ಮತ್ತು ಶಿಕ್ಷಕ - ರಕ್ಷಕ ಸಂಘ ಹಾಗೂ ವಿದ್ಯಾರ್ಥಿಗಳ ಸಹಕಾರಕ್ಕಾಗಿ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.